ಜಿಲ್ಲೆ

ಸಂಶಿ ಪಿಡಿಒ ಅಮಾನತ್ತಿಗೆ ಆದೇಶ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಳೆದ ಒಂದು ತಿಂಗಳಿಂದ ಅನಧಿಕೃತ ರಜೆ ಇರುವ ಹಾಗೂ ಅತಿವೃಷ್ಟಿ ಸಮಯದಲ್ಲೂ ಸ್ಪಂದಿಸದ ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜ ಗಿಣಿವಾಲ ಅವರನ್ನು ಅಮಾನತ್ತು ಮಾಡಲು ತಕ್ಷಣ ಕ್ರಮವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಅವರು ಜಿಪಂ ಸಿಇಒಗೆ ಆದೇಶಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಹಾಗೂ ಪರಿಹಾರ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆ ಸಭೆಯಲ್ಲಿ ಅವರು ಮಾತನಾಡಿದರು.
ಮೇಲಾಧಿಕಾರಿಗೆ ಸರಿಯಾಗಿ ಮಾಹಿತಿ ನೀಡದೆ, ಅನುಮತಿ ಪಡೆಯದೆ ಒಂದು ತಿಂಗಳಿಂದ ಪಿಡಿಒ ಗೈರಾಗಿದ್ದಾರೆ. ಅವರನ್ನು ತಕ್ಷಣ ಅಮಾನತ್ತು ಮಾಡಬೇಕು. ಈ ಕುರಿತು ಜಿಪಂ ಸಿಇಒ ಅವರಿಗೆ ಮಾಹಿತಿ ನೀಡದೆ, ಉದಾಸೀನತೆ ತೋರಿದ ಕುಂದಗೋಳ ತಾಪಂ ಇಒ ಅವರಿಗೆ ಕಾರಣ ಕೇಳಿ ನೋಟಿಸ್​ ನೀಡಬೇಕು. ಈ ರೀತಿ ಅಧಿಕಾರಿಗಳು ಕರ್ತವ್ಯದಲ್ಲಿ ಉದಾಸೀನತೆ, ಬೇಜವಾಬ್ದಾರಿ ತೋರಿದರೆ ಜಿಲ್ಲಾಧಿಕಾರಿ ಹಾಗೂ ಸಿಇಒ ಕ್ರಮ ಜರುಗಿಸಬೇಕು ಎಂದರು.
ಆಗಸ್ಟ್​ನಲ್ಲಿ ಹೆಚ್ಚಿನ ಮಳೆ ಆಗುವ ಮುನ್ಸೂಚನೆ ಇದೆ. ಹೀಗಾಗಿ ತಹಸೀಲ್ದಾರ ಮತ್ತು ಇಓಗಳು ಜಂಟಿಯಾಗಿ ತಾಲೂಕು ಸುತ್ತಬೇಕು. ಜನರಲ್ಲಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ಗ್ರಾಮ ಮತ್ತು ನಗರದ ವಾರ್ಡ್​ಗಳಲ್ಲಿ ಸ್ಥಳಿಯ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ, ಹಳೆಯದಾದ, ಕಚ್ಚಾ ಮತ್ತು ಸೋರುತ್ತಿರುವ ಮನೆಗಳ ಸಮೀಕ್ಷೆ ಮಾಡಿ. ಅಲ್ಲಿ ವಾಸವಿರುವ ಕುಟುಂಬಗಳಿಗೆ ಮುನ್ನೆಚ್ಚರಿಕೆ ನೀಡಬೇಕು. ಅಗತ್ಯವಿದ್ದಲ್ಲಿ ಸಮುದಾಯಭವನ ಅಥವಾ ಇತರ ಕಟ್ಟಡಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚಿನ ಸಮಸ್ಯೆ ಇದ್ದಲ್ಲಿ ಕಾಳಜಿ ಕೇಂದ್ರ ತೆರೆದು ಜನರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಜಿಲ್ಲಾಧಿಕಾರಿ ಮಾತನಾಡಿ, ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂ. 1ರಿಂದ ಈವರೆಗೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ಒಂದು ಜೀವ ಹಾನಿ ಹಾಗೂ 1 ದೊಡ್ಡ ಜಾನುವಾರು ಹಾನಿ ಆಗಿದ್ದು, ನಿಯಮಾನುಸಾರ ಪರಿಹಾರ ವಿತರಿಸಲಾಗಿದೆ. ಅತಿ ಮಳೆಯಿಂದ 10 ಮನೆಗಳು ತೀವ್ರ ತರಹದಲ್ಲಿ ಮತ್ತು 433 ಮನೆಗಳು ಭಾಗಶಃ ಹಾನಿಯಾಗಿವೆ. ಹಾನಿಯಾದ ಮನೆಗಳ ಸಮೀೆ ಮಾಡುತ್ತಿದ್ದು, ತಹಸೀಲ್ದಾರರ ಮೂಲಕ ವರದಿ ನೀಡಲಿದ್ದಾರೆ ಎಂದರು.
ಜಿಪಂ ಸಿಇಒ ಸ್ವರೂಪ ಟಿ.ಕೆ. ಮಾತನಾಡಿ, ಎಲ್ಲ ತಾಪಂ ಇಒಗಳಿಗೆ ಸ್ಥಾನಿಕವಾಗಿದ್ದು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ವಿಪತ್ತು ಪರಿಹಾರ ಕಾರ್ಯಗಳ ಮೇಲುಸ್ತುವಾರಿ ಹಾಗೂ ಅಧಿಕಾರಿಗಳ ಮೇಲೆ ನಿರಂತರ ನಿಗಾವಹಿಸುವಂತೆ ಸೂಚಿಸಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್​, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ತಾಪಂ ಇಒಗಳು, ಇತರರು ಇದ್ದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಸ್ವಾಗತಿಸಿದರು. ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವಂದಿಸಿದರು.