ಜಿಲ್ಲೆ

ಹೈಕೋರ್ಟ್ ನಲ್ಲಿ ಜಾತಿನಿಂದನೆ ಪ್ರಕರಣ ವಿಚಾರಣೆ; ಸುಳ್ಳು ಪ್ರಕರಣದಿಂದ ಪಡೆದ ಪರಿಹಾರ ವಸೂಲಾತಿಗೆ ಆದೇಶ

ಮಂಜುನಾಥ ಅಂಗಡಿ

ಧಾರವಾಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಂಡು ಪೊಲೀಸ್ ಠಾಣೆಗಳಲ್ಲಿ ಸುಳ್ಳು ವಿಷಯಾಧಾರಿತ ದೂರು ದಾಖಲಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಲಕ್ಷಗಟ್ಟಲೇ ಪರಿಹಾರಧನ ಪಡೆದುಕೊಂಡಿದ್ದ ವ್ಯಕ್ತಿಗೆ ಧಾರವಾಡ ಹೈಕೋರ್ಟ್ ಛೀಮಾರಿ ಹಾಕಿದೆ.
ಬಾಗಲಕೋಟೆ ಜಿಲ್ಲೆಯ ಶಾಲೆಯೊಂದರ ಶಿಕ್ಷಕ ಚಂದ್ರು ರಾಠೋಡ ಎಂಬುವರು ಪರಿಹಾರವಾಗಿ ಪಡೆದುಕೊಂಡ ಹಣವನ್ನು ವಸೂಲಾತಿ ಮಾಡುವಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನಿರ್ದೇಶನ ನೀಡಿದ್ದಾರೆ.
ಚಂದ್ರು ರಾಠೋಡ ಕಾರ್ಯನಿರ್ವಹಿಸುತ್ತಿರುವ ಶಾಲೆಯ ಮುಖ್ಯಶಿಕ್ಷಕ ಶಿವಲಿಂಗಪ್ಪ ಕೆರಕಲಮಟ್ಟಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಕೆರಕಲಮಟ್ಟಿ ಅವರ ವಿರುದ್ಧ ಚಂದ್ರು ವಿವಿಧ ಠಾಣೆಗಳಲ್ಲಿ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಚಂದ್ರು ರಾಠೋಡ ಈ ರೀತಿಯ ಪ್ರಕರಣ ದಾಖಲಿಸುವುದನ್ನೇ ವಾಡಿಕೆ ಮಾಡಿಕೊಂಡಿದ್ದಾರೆ ಎಂದು ವಕೀಲ ಅವಿನಾಶ ಅಂಗಡಿ ನ್ಯಾಯಾಲಯದ ಗಮನಕ್ಕೆ ತಂದರು. ಇಂಥ ಎಲ್ಲ ಪ್ರಕರಣಗಳಲ್ಲಿ ಅವರು ತಮ್ಮ ಪರ ಹೇಳಿಕೆ ನೀಡಲು ಮೂವರನ್ನು ಸಾಕ್ಷಿಗಳಾಗಿ ಬಳಸುತ್ತಿದ್ದಾರೆ ಎಂದೂ ವಕೀಲ ಅವಿನಾಶ ಅಂಗಡಿ ನ್ಯಾಯÁಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಗಮನ ಸೆಳೆದರು.
ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಪೊಲೀಸ್ ಠಾಣೆಗಳಲ್ಲಿ ಇಂಥ ಸುಳ್ಳು ಪ್ರಕರಣ ದಾಖಲಿಸುವುದನ್ನು ತಕ್ಷಣ ನಿಲ್ಲಿಸಬೇಕು. ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ತೊಡಗಿಸಿದರೆ ದಂಡ ವಿಽಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.