ಜಿಲ್ಲೆ

ಹಳೇ ವಾಲ್ವಮನ್ ನೇಮಕಕ್ಕೆ ಆದೇಶ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನೀರು ಸರಬರಾಜು, ನಿರ್ವಹಣೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳು ಸುಧಾರಿಸುತ್ತಿಲ್ಲ. ಹೀಗಾಗಿ ಜವಾಬ್ದಾರಿ ಹಿಂಪಡೆಯಲು ನಗರಾಭಿವೃದ್ಧಿ ಸಚಿವರ ಬಳಿ ಸರ್ವ ಪಕ್ಷಗಳ ನಿಯೋಗ ತೆರಳಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.
ನಗರದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಆದೇಶ ಹೊರಡಿಸಿದ ಮೇಯರ್ ಈರೇಶ ಅಂಚಟಗೇರಿ, ಸದ್ಯದ ನೀರಿನ ಸಮಸ್ಯೆ ಪರಿಹರಿಸಲು 48 ಗಂಟೆಯೊಳಗೆ ಈ ಹಿಂದೆ ಜಲಮಂಡಳಿ ಅಡಿ ಕರ್ತವ್ಯ ನಿರ್ವಹಿಸುತ್ತಿದ್ದ 100 ಜನ ವಾಲ್ವಮನ್‌ಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ತಿರ್ಮಾನಿಸಿದರಲ್ಲದೆ, ಇದಕ್ಕಾಗಿ ಸಮಿತಿ ರಚಿಸಲಾಗಿದೆ ಎಂದು ಪ್ರಕಟಿಸಿದರು.
ಎಲ್ ಆ್ಯಂಡ್ ಟಿ ನೇಮಿಸಿದ ನೌಕರರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಸದ್ಯ 100 ಜಲಮಂಡಳಿಯ ವಾಲ್ವಮನ್‌ಗಳನ್ನು ಕೆಲಸಕ್ಕೆ ಸೇರಿಸುವ ಜವಾಬ್ದಾರಿ ಪಾಲಿಕೆ ನೇಮಿಸಿದ ಸಮಿತಿಗೆ ಇದೆ. ಸಮಿತಿಯು ಇನ್ನೂ ಹೆಚ್ಚು ಜನ ಸೇರಿಸುವ ಅಗತ್ಯವಿದೆ ಎಂದು ವರದಿ ಸಲ್ಲಿಸಿದರೆ, ಉಳಿದವರನ್ನು ಹಂತಹಂತವಾಗಿ ಸೇರಿಸಿಕೊಳ್ಳಲಾಗುವುದು ಎಂದರು.
ಜವಾಬ್ದಾರಿ ವಾಪಸ್: ಹಲವು ವರ್ಷಗಳಿಂದ ಕೃಷಿ ವಿಶ್ವ ವಿದ್ಯಾಲಯಕ್ಕೆ ನೀಡಲಾಗಿದ್ದ ಕೆಲಗೇರಿ ಕರೆ ನಿರ್ವಹಣೆ ಜವಾಬ್ದಾರಿಯನ್ನು ಪಾಲಿಕೆ ವಾಪಸ್ ಪಡೆಯುವಂತೆ ಮೇಯರ್ ಆದೇಶಿಸಿದ್ದಾರೆ. ಹು-ಧಾ ಅವಳಿನಗರದಲ್ಲಿನ ಕೆರೆಗೆ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ ಹಲವು ಸದಸ್ಯರು ಕೆಲಗೇರಿ ಕೆರೆ ದುರವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಈ ಆದೇಶ ಹೊರಡಿಸಿದರು.
ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಹುಬ್ಬಳ್ಳಿ ಉಣಕಲ್ ಕರೆ, ಚನ್ನಪ್ಪನಕೆರೆಗೆ ಚರಂಡಿ ನೀರು ಸೇರಿ ಮೀನುಗಳು ಸಾಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ತೋಳನನಕೆರೆ ಸ್ಥಿತಿ ಕುರಿತು ತಿಪ್ಪಣ್ಣ ಮಜ್ಜಗಿ ವಿವರಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತ ಡಾ. ಗೋಪಾಲಕೃಷ್ಣ, 15ನೇ ಹಣಕಾಸಿನಲ್ಲಿ ಉಳಿಕೆ ಹಣ ಬಳಸಿ ಉಣಕಲ್‌ಕೆರೆ, ತೋಳನಕೆರೆಯಲ್ಲಿ ಎರಡು ಪ್ರತ್ಯೇಕ ಎಸ್‌ಟಿಪಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಪ್ರತಿಧ್ವನಿಸಿದ ಇ-ಸ್ವತ್ತು: ಪಾಲಿಕೆ ಅಧಿಕಾರಿಗಳು ಇ-ಸ್ವತ್ತು ಅರ್ಜಿ ವಿಲೇವಾರಿಗೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಆಸ್ತಿ ಮಾರಾಟ, ಖರೀದಿಗೆ ವಿಳಂಬ ಆಗುತ್ತಿದೆ. ಕೆಲ ಕಡೆಗಳಲ್ಲಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಸದಸ್ಯ ವೀರಣ್ಣ ಸವಡಿ ಸೇರಿ ಬಹುತೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಇ- ಸ್ವತ್ತು ಕುರಿತು ಆಯುಕ್ತರು ಪರಿಶೀಲನೆ ನಡೆಸಬೇಕು. ಜನರನ್ನು ಅಧಿಕಾರಿಗಳು ಪೀಡಿಸುತ್ತಿದ್ದರೆ ಅಂತಹವರನ್ನು ಅಮಾನತುಗೊಳಿಸಬೇಕು. ಏಜೆಂಟ್‌ರು ಜನರಿಂದ ಹಣ ಸುಲಿಗೆ ಮಾಡುತ್ತಿದ್ದರೆ ಎಫ್‌ಐಆರ್ ದಾಖಲಿಸಬೇಕು. ಇ- ಸ್ವತ್ತು ಅರ್ಜಿ ಏಳು ದಿನಕ್ಕಿಂತ ಹೆಚ್ಚು ದಿನ ಬಾಕಿ ಉಳಿದರೆ ಆಗ ಸಂಬಂಧಿಸಿದ ವಲಯ ಅಧಿಕಾರಿಯನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದರು. ನಂತರ ಆಯುಕ್ತ ಡಾ. ಗೋಪಾಲಕೃಷ್ಣ ಮಾತನಾಡಿ, ಇ- ಸ್ವತ್ತು ಅರ್ಜಿ 7 ದಿನಗಳಲ್ಲಿ ಇತ್ಯರ್ಥಗೊಳ್ಳಬೇಕು. ಈ ಕುರಿತು ಪ್ರತಿ ವಲಯ ಕಚೇರಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಅಗತ್ಯಬಿದ್ದರೆ ಇ- ಸ್ವತ್ತು ಅಧಿಕಾರವನ್ನು ಕೇಂದ್ರೀಕೃತಗೊಳಿಸಲಾಗುವುದು ಎಂದರು.