ಜಿಲ್ಲೆ

ರದ್ದಾದ ಕಾರ್ಡ್‌ಗಳಿಗೆ ರೇಷನ್ ಹಂಚಿಕೆಗೆ ಆದೇಶ: ಪಡಿತರ ಚೀಟಿ ಮರುಸ್ಥಾಪಿಸಲೂ ಸೂಚನೆ

ಬೆಂಗಳೂರು: ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದವರ ರದ್ದಾದ ಪಡಿತರ ಚೀಟಿಗಳನ್ನು ಮರುಸ್ಥಾಪಿಸುವ ಜತೆಗೆ ಅಂತಹ ಕಾರ್ಡ್‌ದಾರರಿಗೆ ಕೂಡಲೇ ಪಡಿತರ ಧಾನ್ಯ ವಿತರಿಸುವಂತೆ ಆಹಾರ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ವೇಳೆ ಲಕ್ಷಾಂತರ ಸಂಖ್ಯೆಯ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದಕ್ಕೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಇಲಾಖೆಯ ಸಚಿವರು ಅಂತಹ ಕ್ರಮವನ್ನು ಸ್ಥಗಿತಗೊಳಿಸಲು ಗುರುವಾರ ವಾಗ್ದಾನ ನೀಡಿದ್ದರು. ಇದರನ್ವಯ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಆದೇಶ ರೂಪದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.

ಮರುಸ್ಥಾಪನೆ ಕಾರ್ಯವನ್ನು ಆಹಾರ ತಂತ್ರಾಂಶದಲ್ಲಿ ಜಂಟಿ/ಉಪ ನಿರ್ದೇಶಕರ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿದೆ. ಈ ಕಾರ್ಯವನ್ನು ನೋಡಲ್ ಅಧಿಕಾರಿಗಳು ಉಸ್ತುವಾರಿ ವಹಿಸಿದ ಜಿಲ್ಲೆಗಳಲ್ಲಿ ಮೇಲ್ವಿಚಾರಣೆಗೊಳಿಸಬೇಕು. ಮರುಸ್ಥಾಪಿಸಿದ ಕಾರ್ಡ್‌ಗಳಿಗೆ ನ.25ರೊಳಗೆ ಆಹಾರ ಧಾನ್ಯ ಹಂಚಿಕೆ ಮಾಡಬೇಕು. ಈ ವೇಳೆ ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿಸುವವರ ಕಾರ್ಡ್ ಮಾತ್ರ ರದ್ದುಪಡಿಸಿ ಉಳಿದವರ ಕಾರ್ಡ್‌ಗಳನ್ನು ರದ್ದುಪಡಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.