ಪುತ್ತೂರು: ಭೂ ಮಾಲೀಕರಿಗೆ ಭೂಧೀಸ್ವಾನ ಪರಿಹಾರ ಮೊತ್ತ ಪಾವತಿಸಲು ತಪ್ಪಿದ ಹಿನ್ನೆಲೆಯಲ್ಲಿ ಭೂಸ್ವಾಧೀನ ಅಧಿಕಾರಿಯಾದ ಪುತ್ತೂರು ಸಹಾಯಕ ಆಯುಕ್ತರ ಕಚೇರಿಯ ಚರ ಸ್ವತ್ತುಗಳು ಹಾಗೂ ವಾಹನ ಜಪ್ತಿಗೆ ನ್ಯಾಯಾಲಯದ ಆದೇಶ ಮಾಡಿದೆ.
೨೦೧೨ನೇ ಸಾಲಿನಲ್ಲಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿ ೮೮ರ ರಸ್ತೆ ಅಗಲಗೊಳಿಸಲು ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪುತ್ತೂರು ತಾಲೂಕು ಕಬಕ ಪೇಟೆಯಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನ ಪಡಿಸಿದ ಭೂಮಿಗೆ ಸೂಕ್ತ ಪರಿಹಾರ ಪಾವತಿಸುವಂತೆ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಮಾಡಿತ್ತು. ಇದರಂತೆ ಪರ್ಲಡ್ಕ ನಿವಾಸಿ ಶಿವಶಂಕರ ಭಟ್‌ಗೆ ೧೪,೯೩,೪೩೮ ರೂ.ಪಾವತಿಸಬೇಕಾಗಿತ್ತು. ಅದನ್ನು ಪಾವತಿಸದ ಕಾರಣ ಭೂಮಾಲೀಕರು ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಭೂಸ್ವಾಧೀನ ಪ್ರಾಧಿಕಾರದ ಸಹಾಯಕ ಆಯುಕ್ತರಿಗೆ ಸಮಯಾವಕಾಶ ನೀಡಿದರೂ ಪರಿಹಾರ ಮೊತ್ತ ಪಾವತಿಸದ ಕಾರಣ ಸಹಾಯಕ ಆಯುಕ್ತರ ಕಚೇರಿಯ ಚರ ಸ್ವತ್ತುಗಳಾದ ಕಂಪ್ಯೂಟರ್‌ಗಳು, ಟೇಬಲ್, ಕುರ್ಚಿಗಳು ಹಾಗೂ ಸಹಾಯಕ ಆಯುಕ್ತರ ವಾಹನವನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕ್ರಿಯೆ ನಡೆಸಲು ಅಽಕಾರಿಗಳನ್ನು ನಿಯೋಜಿಸಿದೆ.