ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಮುಂಗಾರು ಮಳೆ ಬಿರುಸುಗೊಂಡಿದೆ. ದ.ಕ.ಜಿಲ್ಲೆಯಾದ್ಯಂತ ಸಂಜೆಯಿಂದ ಆಗಾಗ ಹಗುರದಿಂದ ಸಾಧಾರಣ ಮಳೆ ಕಾಣಿಸಿದೆ. ಭಾರತೀಯ ಹವಾಮಾನ ಇಲಾಖೆ ಜು.13ರಂದು ಕರಾವಳಿಯಲ್ಲಿ ಅರೆಂಜ್ ಅಲರ್ಟ್, ಜು.14 ಹಾಗೂ 15 ರಂದು ರೆಡ್ ಅಲರ್ಟ್ ಘೋಷಿಸಿದೆ.
ದ.ಕ.ದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕ್ಷೀಣವಾಗಿತ್ತು. ಶುಕ್ರವಾರ ಮಧ್ಯಾಹ್ನ ವರೆಗೆ ಬಿಸಿಲು ಸಹಿತ ಮೋಡ, ಅಲ್ಲಲ್ಲಿ ತುಂತುರು ಹನಿ ಕಂಡುಬಂದರೆ, ಮಧ್ಯಾಹ್ನ ನಂತರ ಎಲ್ಲೆಡೆ ಪೂರ್ಣ ಪ್ರಮಾಣದ ಮೋಡಕವಿದ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆ ಮಂಗಳೂರು, ಕೊಣಾಜೆ, ಸುರತ್ಕಲ್ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದೆ. ಕರಾವಳಿ ಜಿಲ್ಲೆಗಳಾದ್ಯಂತ ಮುಂದಿನ 4 ದಿನ ಸಾಧಾರಣ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಈಗಿನಂತೆ ರಾಜ್ಯದ ಮಲೆನಾಡು ಭಾಗಗಳಲ್ಲಿ ಹಾಗೂ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಜುಲೈ 16 ರಿಂದ ರಿಂದ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗುವ ಲಕ್ಷಣಗಳಿವೆ.
ಕರಾವಳಿಯಲ್ಲಿ ಗಂಟೆಗೆ 40ಕಿ.ಮೀ ನಿಂದ 48 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಮುಂದಿನ 1-2 ದಿನಗಳಲ್ಲಿ ಕರಾವಳಿಯಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಂಭವವಿದ್ದು, ಸಂಭವಿಸಬಹುದಾದ ಹಾನಿ ತಪ್ಪಿಸಲು ಎನ್‌ಡಿಆರ್‌ಎಫ್ ತಂಡ 24*7 ರೀತಿಯಲ್ಲಿ ಸನ್ನದ್ದವಾಗಿದೆ.
*ನದಿನೀರಿನ ಮಟ್ಟ ಏರಿಕೆ
ಪಶ್ಚಿಮಘಟ್ಟದ ಕೆಳಭಾಗದ ಪ್ರದೇಶಗಳಾದ ಚಾರ್ಮಡಿ, ಶಿರಾಡಿ, ಆಗುಂಬೆ ಸುತ್ತಮುತ್ತ ಮಂಜುಕವಿದ ವಾತಾವರಣ, ಉತ್ತಮ ಮಳೆ ಆಗಿದ್ದು, ವಾಹನ ಸಂಚಾರಕ್ಕೆ ತುಸು ತೊಂದರೆಯಾಗಿತ್ತು. ಈಬಾಗದಲ್ಲಿ ಮುಂದಿನ 2-3 ದಿನ ಉತ್ತಮ ಮಳೆಯ ಮುನ್ಸೂಚನೆ ಇದ್ದು, ನದಿಮೂಲದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಶುಕ್ರವಾರ ಉಪ್ಪಿನಂಗಡಿ ನೇತ್ರಾವತಿ ನದಿ 24.5 ಮೀಟರ್ ಹಾಗೂ ತುಂಬೆ ನೇತ್ರಾವತಿ ನದಿ 3.4 ಮೀಟರ್‌ನಲ್ಲಿ ಹರಿಯುತ್ತಿದೆ. ಕರಾವಳಿಯಲ್ಲಿ ಕಳೆದ 3-4 ದಿನಗಳಿಂದ ಮುಂಗಾರು ಮಳೆಯಾಗುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಾಗರ ಭೂ ವಿಜ್ಞಾನ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳ ಕಾಲಾವಧಿಯಲ್ಲಿ ದ.ಕ ಜಿಲ್ಲೆಯಲ್ಲಿ ಮಳೆಯಿಂದಾಗಿ ಆಸ್ತಿಪಾಸ್ತಿ, ಪ್ರಾಣಾ ಹಾನಿ ಸಂಭವಿಸಿಲ್ಲ ಎಂದು ದ.ಕ ಜಿಲ್ಲಾಡಳಿತ ಮಾಹಿತಿ ನೀಡಿದೆ.
------------------
ಇಂದು ಆರೆಂಜ್ ಅಲರ್ಟ್- ಉತ್ತಮ ಮಳೆ ಸಾಧ್ಯತೆ
ಕರಾವಳಿಯಲ್ಲಿ ಜು.13ರಂದು ಉತ್ತಮ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅರೆಂಜ್ ಅಲರ್ಟ್ ಘೋಷಿಸಿದೆ.ದ.ಕ ಜಿಲ್ಲೆಯಲ್ಲಿ ಶುಕ್ರವಾರ 29.6 ಡಿ.ಸೆ ಗರಿಷ್ಟ, 22.9ಡಿ.ಸೆ ಕನಿಷ್ಟ ಉಷ್ಟಾಂಶ ದಾಖಲಾಗಿದೆ. ದಿನದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 8 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 6.8 ಮಿ.ಮೀ, ಬಂಟ್ವಾಳದಲ್ಲಿ 12.7 ಮಿ.ಮೀ, ಮಂಗಳೂರು 18.6 ಮಿ.ಮೀ, ಪುತ್ತೂರು 7.4 ಮಿ.ಮೀ, ಸುಳ್ಯದಲ್ಲಿ 3.5 ಮಿ.ಮೀ, ಮೂಡುಬಿದಿರೆಯಲ್ಲಿ 12.7 ಮಿ.ಮೀ, ಕಡಬದಲ್ಲಿ 2.8 ಮಿ.ಮೀ, ಮೂಲ್ಕಿಯಲ್ಲಿ 5.9 ಮಿ.ಮೀ ಹಾಗೂ ಉಳ್ಳಾಲದಲ್ಲಿ 13.9 ಮಿ.ಮೀ ಮಳೆಯಾಗಿದೆ.