ಜಿಲ್ಲೆ

ನಾಳೆಯಿಂದ 7 ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್: 132 ತಾಲೂಕಿನಲ್ಲಿ ಅಧಿಕ ವರ್ಷಧಾರೆ

ಹರೀಶ್​​ ಕೆ.ಸಿ.

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯಾದ್ಯಂತ ಶುಕ್ರವಾರವೂ ಮಳೆ ಅಬ್ಬರ ಮುಂದುವರಿದಿದೆ. ಕರಾವಳಿ, ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆ ತೀವ್ರತೆ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಜು. 27 ಮತ್ತು ಜು. 28ರಂದು ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್​ ಅರ್ಲಟ್​ ಕೊಟ್ಟಿದೆ. ಜು.29ರಿಂದ ಜು.31ರವರೆಗೆ ಈ ಮೇಲಿನ ಜಿಲ್ಲೆಗಳಲ್ಲಿ ಯೆಲ್ಲೋ ಅರ್ಲಟ್​ ಇರಲಿದೆ. ಬೆಳಗಾವಿಯಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅರ್ಲಟ್​ ನೀಡಲಾಗಿದೆ.ಬೀದರ್​, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರಿನಲ್ಲಿ ಮುಂದಿನ ನಾಲ್ಕು ದಿನ ಸಾಧಾರಣ ವರ್ಷಧಾರೆಯಾಗಲಿದೆ.

ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ಸಿ.ಎಸ್​.ಪಾಟೀಲ್​ ಮಾತನಾಡಿ, ಸದ್ಯ ಹವಾಮಾನದ ಸ್ಥಿತಿ ಗಮನಿಸಿದರೆ ಆ.1ರಿಂದ ರಾಜ್ಯದಲ್ಲಿ ಮಳೆ ಇಳಿಮುಖವಾಗಲಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜು.31ರಿಂದ ಮಳೆ ಕಡಿಮೆಯಾಗಲಿದೆ. ಮಲೆನಾಡು, ಕರಾವಳಿಯಲ್ಲಿ ಮಳೆ ತೀವ್ರತೆ ಜಾಸ್ತಿ ಇರಲಿದೆ. ಉಳಿದಢೆ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಹೇಳಿದರು.

ವಾಡಿಕೆಗಿಂತ ಅಧಿಕ:

ಜು.1ರಿಂದ ಜು.26ರವರೆಗೆ 132 ತಾಲೂಕಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು ಗಮನಾರ್ಹ. 56 ತಾಲೂಕುಗಳಲ್ಲಿ ವಾಡಿಕೆಯಷ್ಟೇ ಬಿದ್ದರೆ, 46 ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 2 ತಾಲೂಕಿನಲ್ಲಿ ಮಾತ್ರ ಮಳೆ ಕೊರತೆ ಉಂಟಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.