ಜಿಲ್ಲೆ

ನಾಲ್ಕು ದಿನಗಳ ಕಾಲ ಆರೆಂಜ್ ಆಲರ್ಟ್ ಘೊಷಣೆ

Mangaluru - Shravan Kumar Nala

ಮಂಗಳೂರು: ಕರಾವಳಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಆರೆಂಜ್ ಆಲರ್ಟ್ ಘೋಷಿಸಲಾಗಿದ್ದು, ಭಾರತೀಯ ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ಜೂನ್ 8 ರಿಂದ 11ರ ವರೆಗೆ ಆರೆಂಜ್ ಅಲರ್ಟ್ ಹಾಗೂ ಜೂ.12ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಮುಂಗಾರು ಮಳೆ ತುಸು ಚುರುಕುಗೊಂಡಿದೆ. ಬೆಳಗ್ಗೆ ಮಂಗಳೂರು ಸೇರಿದಂತೆ ಉಳ್ಳಾಲ ಮತ್ತಿತರ ಗ್ರಾಮೀಣ ಭಾಗಗಳಲ್ಲಿ ಹಗುರದಿಂದ ಧಾರಾಕಾರ ಮಳೆಯಾಗಿದೆ. ಸಂಜೆ ವೇಳೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಕಾಣಿಸಿದೆ. ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿ 31.6 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹವಾಮಾನ ಇಲಾಖೆ ಪ್ರಕಾರ ಮುಂದಿನ ಏಳು ದಿನಗಳ ಕಾಲ ಕರಾವಳಿಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಅಥವಾ ಗುಡುಗು ಸಹಿತ ಗಾಳಿ ಉಂಟಾಗುವ ಸಾಧ್ಯತೆ ಹೇಳಲಾಗಿದೆ.

*ಕರಾವಳಿಯಲ್ಲಿ ಮಿಶ್ರವಾತಾವರಣ

ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ದಿನಪೂರ್ತಿ ಮಿಶ್ರ ವಾತಾವರಣ ಇದ್ದು, ತಂಪಾದ ವಾತಾವರಣ ಕಂಡುಬಂದಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಜಿಲ್ಲೆಯ ಹಲವಡೆ ಮಳೆಯಾಗಿದೆ. ಹವಾಮಾಮನ ಇಲಾಖೆ ಮಾಹಿತಿಯಂತೆ ಶನಿವಾರ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಒಂದೆರಡು ಗುಡುಗು ಸಹಿತ ಮಳೆಯ ಮುನ್ಸೂಚೆನೆ ಇದೆ. ಶುಕ್ರವಾರ ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು, ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಮತ್ತು ಗೋವಾಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಗರಿಷ್ಠ 30.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನ ವರೆಗೆ ಒಟ್ಟು ಮಳೆ 6.7 ಮಿ.ಮೀ. ದಾಖಲಾಗಿದೆ. ಬೆಳ್ತಂಗಡಿ 5 ಮಿ.ಮೀ, ಬಂಟ್ವಾಳ 4.1ಮಿ.ಮೀ, ಮಂಗಳೂರು 8.1 ಮಿ.ಮೀ, ಪುತ್ತೂರು 6.1 ಮಿ.ಮೀ, ಸುಳ್ಯ 10.1 ಮಿ.ಮೀ, ಮೂಡುಬಿದಿರೆ 2.1 ಮಿ.ಮೀ, ಕಡಬ 4.2 ಮಿ.ಮೀ, ಉಳ್ಳಾಲ 3.1 ಮಿ.ಮೀ. ಮಳೆ ದಾಖಲಾಗಿದೆ.