ಆಪ್ಸ್‌ಕೋಸ್ ಸರ್ವ ಸದಸ್ಯರ ಸಭೆಯಲ್ಲಿ ಕೆ.ಎಂ.ಸೂರ್ಯನಾರಾಯಣ ಮಾತನಾಡಿದರು. ಎ.ಓ.ರಾಮಚಂದ್ರ, ಬಿ.ಎ.ಇಂದೂಧರ, ಆರ್.ಎಸ್.ಗಿರಿ, ಕೆ.ಎಂ.ಸತ್ಯನಾರಾಯಣ ಇತರರಿದ್ದರು. 
ಜಿಲ್ಲೆ

ಅಡಕೆ ಅವಕದಲ್ಲಿ ಆಪ್ಸ್‌ಕೋಸ್ ನಂ.1

Shivamogga - Desk - Praveena Kumar S

ಸಾಗರ: ಕಳೆದ ಆರ್ಥಿಕ ಸಾಲಿನಲ್ಲಿ ಆಪ್ಸ್‌ಕೋಸ್ (ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ) 89,964 ಮೂಟೆ ಅಡಕೆ ಅವಕ ಮಾಡಿಕೊಂಡಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಅತಿಹೆಚ್ಚು ಅಡಕೆ ಆವಕ ಮಾಡಿಕೊಂಡ ಸಹಕಾರಿ ಸಂಸ್ಥೆ ನಮ್ಮದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅಪ್ಸ್‌ಕೋಸ್ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಖಂಡಿಕಾ ಹೇಳಿದರು
ನಗರದಲ್ಲಿ ಶನಿವಾರ ಅಪ್ಸ್‌ಕೋಸ್ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು 4.92 ಕೋಟಿ ರೂ. ಐತಿಹಾಸಿಕ ಲಾಭ ಗಳಿಸಿದ್ದು, ರಾಜ್ಯದಲ್ಲಿಯೆ ಅತಿಹೆಚ್ಚು ಲಾಭ ಗಳಿಸಿದ ಎರಡನೇ ಸಹಕಾರಿ ಸಂಸ್ಥೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಶೇ. 95 ಸಾಲ ವಸೂಲಾತಿ ಮಾಡುವ ಮೂಲಕ ಆರ್ಥಿಕ ಕ್ರೋಡೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ರೈತರನ್ನು ಸಾಲಬಾಧೆಯಿಂದ ಹೊರಗೆ ತರಬೇಕು ಎನ್ನುವ ಉದ್ದೇಶದಿಂದ ಸಾಲದ ಮೇಲಿನ ಬಡ್ಡಿಯನ್ನು ತೀರ ಕಡಿಮೆ ಮಾಡಿದೆ ಎಂದು ಮಾಹಿತಿ ನೀಡಿದರು.
ಸುವರ್ಣ ಮಹೋತ್ಸವ ಆಚರಿಸಿರುವ ಆಪ್ಸ್‌ಕೋಸ್ ಹಿರಿಯ ಸಹಕಾರಿಗಳ ಪರಿಕಲ್ಪನೆಯಾಧಾರದಲ್ಲಿ ನಿರ್ಮಾಣವಾಗಿದ್ದು ಅನೇಕ ಸಹಕಾರಿಗಳು ಇದನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ನಮ್ಮ ಆಡಳಿತ ಮಂಡಳಿ ಷೇರುದಾರರು ನೀಡಿದ ಭರವಸೆಯನ್ನು ಉಳಿಸಿಕೊಂಡಿದ್ದೇವೆ ಎನ್ನುವ ಆತ್ಮತೃಪ್ತಿಯನ್ನು ಹೊಂದಿದೆ. ಸಾಗರ, ಹೊಸನಗರ, ನಿಟ್ಟೂರು, ತುಮರಿ ಭಾಗದಲ್ಲಿ ಗೋದಾಮು ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದ್ದು ಇದಕ್ಕಾಗಿ 10 ಕೋಟಿ ರೂ. ಕಾಯ್ದಿರಿಸಲಾಗಿದೆ. ಏಳು ಎಕರೆ ಜಾಗದಲ್ಲಿ ಸೋಲಾರ್ ವಿದ್ಯುತ್ ತಯಾರಿಕಾ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಸಹ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಎ.ಓ.ರಾಮಚಂದ್ರ, ನಿರ್ದೇಶಕರಾದ ಬಿ.ಎ.ಇಂದೂಧರ, ಕಟ್ಟಿನಕೆರೆ ಸೀತಾರಾಮಯ್ಯ, ಆರ್.ಎಸ್.ಗಿರಿ, ಕೆ.ಎಸ್.ಸುಬ್ರಾವ್, ಕಲ್ಯಾಣಪ್ಪ ಗೌಡ, ಗುರುಪಾದ ಕೆರೆಕೊಪ್ಪ, ರಾಘವೇಂದ್ರ ಹೊಡಬಟ್ಟೆ, ಲಂಬೋದರ್, ಕೆ.ಎಂ.ಸತ್ಯನಾರಾಯಣ್ ಇತರರಿದ್ದರು.