ಜಿಲ್ಲೆ

ವಕ್ಫ್ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ : ಶಾಸಕ ಉಮಾನಾಥ ಕೋಟ್ಯಾನ್ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಹಿಂದು ಮತ್ತು ಮುಸ್ಲಿಮರ ನಡುವೆ ಗಲಭೆ ತಂದಿಟ್ಟು, ದಿನ ದೂಡಲು ರೈತರ ಭೂಮಿ ಸಂಬಂಧಿತ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಿಸಿ ಸಮಸ್ಯೆ ಉಂಟುಮಾಡಿದ ಕಾರ್ಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಮುಖ್ಯ ಕಾರಣ ಎಂದು ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು, ಬಹುಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸಲು ವಕ್ಫ್ ಹೆಸರಿನಲ್ಲಿ ಸರ್ಕಾರ ರೈತರ ಭೂಮಿ ವಕ್ಫ್ ಭೂಮಿ ಎಂದು ಹೇಳಿ ಕಬಳಿಸಲು ಪ್ರಯತ್ನಿಸುತ್ತಿರುವುದು ಖಂಡನಿಯ ಎಂದು ಮೂಲ್ಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1995ರಲ್ಲಿ ವಕ್ಫ್ ಆ್ಯಕ್ಟ್‌ಗೆ ಹೆಚ್ಚುವರಿ ನಿಬಂಧನೆ ಸೇರಿಸಿ ಹಿಂದುಗಳಿಗೆ ಕಾಂಗ್ರೆಸ್ ಸರ್ಕಾರ ಬಹಳ ದೊಡ್ಡ ಮಟ್ಟದ ಅನ್ಯಾಯ ಮಾಡಿದೆ. ಅದಕ್ಕೆ ಸೂಕ್ತ ತಿದ್ದುಪಡಿ ಜತೆಗೆ ಹಿಂದುಗಳ ಭೂಮಿ ಕಬಳಿಸಿದ ವಕ್ಫ್ ಬೋರ್ಡ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಎಂದರು.

ಸಿದ್ದರಾಮಯ್ಯ ಮುಡಾ ಸೈಟ್ ಹಗರಣದ ಸೂತ್ರದಾರನಾಗಿದ್ದು, ಈಡಿ ದಾಳಿಯ ಭೀತಿಯಿಂದ ಸೈಟ್ ವಾಪಸ್ ಮಾಡಿದ್ದಾರೆ. ಮುಡಾದ 14 ಸೈಟ್‌ಗಳನ್ನು ನುಂಗಿ ನೀರು ಕುಡಿದವರಿಗೆ ಆರ್‌ಟಿಸಿ ಬದಲಾಯಿಸಲು ಕಷ್ಟವೇನಿಲ್ಲ. ಅಂತಹ ಕಳ್ಳರ ಸರ್ಕಾರ ಈಗ ಆಡಳಿತದಲ್ಲಿದ್ದು ಆದಷ್ಟು ಬೇಗ ತೊಲಗಿದರೆ ಜನ ನೆಮ್ಮದಿಯಿಂದ ಇರಲು ಸಾಧ್ಯ ಎಂದರು.

*ರಾಜ್ಯಾದ್ಯಂತ ಉಗ್ರ ಹೋರಾಟ: ರಾಜ್ಯದಲ್ಲಿ ಅಭಿವೃದ್ಧಿ ನಡೆಸದೆ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇಲ್ಲ. ಕರಾವಳಿ ಪ್ರದೇಶದಲ್ಲಿ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದ್ದು, ಕೂಡಲೇ ರೈತರ ಭೂಮಿಗೆ ನೀಡಿದ ನೋಟಿಸ್ ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮೂಲ್ಕಿ ಮೂಡುಬಿದಿರೆ ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಬಳ್ಕುಂಜೆ, ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಶೈಲೇಶ್, ಸುಭಾಷ್ ಶೆಟ್ಟಿ, ಬಿಜೆಪಿ ನಾಯಕರಾದ ರಂಜಿತ್ ಪೂಜಾರಿ ತೋಡಾರು, ಹರಿಪ್ರಸಾದ್ ಮೂಡುಬಿದಿರೆ, ವಿಠಲ್ ಎನ್.ಎಂ. ಉಪಸ್ಥಿತರಿದ್ದರು.