ಮುಂಡಗೋಡ: ಜಿಪಿಎಸ್ ಹೊಂದಿರುವ ಅರಣ್ಯ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಬ್ಬಾಳಿಕೆ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅವರು ಮಾತನಾಡಿದರು. ಅರಣ್ಯದಲ್ಲಿ ಮರಗಳನ್ನು ಕಡಿಯುವವರಿಗೆ ಹಾಗೂ ಅರಣ್ಯ ಒತ್ತುವರಿ ಮಾಡುವವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ. ಆದರೆ, ಈ ಹಿಂದೆ ಅತಿಕ್ರಮಣ ಮಾಡಿಕೊಂಡು ಜಿಪಿಎಸ್ ಹೊಂದಿರುವ ರೈತರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ದಬ್ಬಾಳಿಕೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಮಳೆ-ಗಾಳಿಗೆ ಅರಣ್ಯದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಮರಗಳು ನೆಲಕಚ್ಚುತ್ತವೆ. ವರ್ಷವಿಡೀ ಅವು ಹಾಗೆಯೇ ಬಿದ್ದು ಕೊಳೆತು ಹೋಗುತ್ತವೆ. ಅಂತಹ ಮರಗಳನ್ನು ಕಟ್ಟಿಗೆ ಡಿಪೋಗೆ ತಂದು ಆದಾಯ ಹೆಚ್ಚಿಸುವ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಅಧಿಕಾರಿ ಟಿ.ವೈ.ದಾಸನಕೊಪ್ಪ ಮಾತನಾಡಿ, ತಾಲೂಕಿನ 16 ಗ್ರಾಮ ಪಂಚಾಯಿತಿಗಳಿಂದ ಬಿದಿದೀಪ ಹಾಗೂ ಕುಡಿಯುವ ನೀರಿನ ವಿದ್ಯುತ್ ಪೊರೈಕೆ ಮಾಡಿರುವುದು ಎರಡು ಕೋಟಿ ರೂ.ಗೂ ಅಧಿಕ ಹಣ ಹೆಸ್ಕಾಂಗೆ ತುಂಬುವುದು ಬಾಕಿ ಇದೆ. ಪಂಚಾಯಿತಿಗಳಿಗೆ ಅನುದಾನ ಬರುತ್ತಿಲ್ಲ. ಆದ್ದರಿಂದ ಹೆಸ್ಕಾಂಗೆ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರು.
ಹಂತಹಂತವಾಗಿ ಬಿಲ್ ತುಂಬುವಂತೆ ಶಾಸಕರು ಪಿಡಿಒಗಳಿಗೆ ಸೂಚನೆ ನೀಡಿದರು. ಮಳೆಗಾಳಿಗೆ 84 ವಿದ್ಯುತ್ ಕಂಬ ಹಾಗೂ 14 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ ಎಂದು ಹೆಸ್ಕಾಂ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಶಿಕ್ಷಣಾಧಿಕಾರಿ ಸುಮಾ ಜಿ. ಮಾತನಾಡಿ, ಶೈಕ್ಷಣಿಕ ವರ್ಷದ ಪುಸ್ತಕಗಳ ಬೇಡಿಕೆ ಪ್ರಕಾರ ಶೇ. 27ರಷ್ಟು ಪುಸ್ತಕಗಳು ಇದುವರೆಗೆ ಸರಬರಾಜು ಆಗಿವೆ. ತಾಲೂಕಿನಲ್ಲಿ 77ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳ ದುರಸ್ತಿಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು.
ಕೊಳವೆಬಾವಿಯಲ್ಲಿ ನೀರು ಇದ್ದರೆ ಮಾತ್ರ ಜೆಜೆಎಂ ಕಾಮಗಾರಿ ಕೈಗೊಳ್ಳಿ ನೀರಿಲ್ಲದಿದ್ದರೆ ಕಾಮಗಾರಿ ನಡೆಸಬೇಡಿ ಎಂದು ಶಾಸಕ ಶಿವರಾಮ ಹೆಬ್ಬಾರ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ನಂತರ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನೆ ವರದಿಯನ್ನು ಸಭೆಯಲ್ಲಿ ನೀಡಿದರು.
ತಹಸೀಲ್ದಾರ್ ಶಂಕರ ಗೌಡಿ, ಸದಸ್ಯರಾದ ಕೃಷ್ಣ ಹಿರಳ್ಳಿ, ಎಚ್.ಎಂ. ನಾಯ್ಕ, ರಾಜಶೇಖರ ಹಿರೇಮಠ, ಗೋಪಾಲ ಪಾಟೀಲ ಎಂ.ಎನ್. ದುಂಡಸಿ, ಶಾರದಾಬಾಯಿ ಇದ್ದರು.