ಜಿಲ್ಲೆ

ವೈದ್ಯರ ವರ್ಗಾವಣೆಗೆ ವಿರೋಧ

Uttara Kannada - Subash Hegde

ಕುಮಟಾ: ಕಳೆದ ಅನೇಕ ವರ್ಷಗಳಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜನತೆ ಎಷ್ಟು ಗೋಳಾಡಿದರೂ, ಇದುವರೆಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿಲ್ಲ. ಇದೀಗ ಕುಮಟಾ ತಾಲೂಕಿನ ಆಸ್ಪತ್ರೆಯಲ್ಲಿರುವ ಉತ್ತಮ ವೈದ್ಯರನ್ನು ಬೇರೆಡೆಗೆ ವರ್ಗಾವಣೆ ಮಾಡುವ ಆದೇಶ ಹೊರಬಂದಿದ್ದು, ಸರ್ಕಾರಗಳಿಂದ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯು ಸಮಸ್ಯೆಗಳಿಗೆ 'ಉತ್ತರ ಕಾಣದ ಜಿಲ್ಲೆಯಾಗಿದೆ' ಎಂದು ವಕೀಲ ಆರ್. ಜಿ ನಾಯ್ಕ ಹೇಳಿದರು. 

ಬುಧವಾರ ಖಾಸಗಿ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉತ್ತರ ಕನ್ನಡದ ಜನರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕಳೆದ ಅನೇಕ ವರ್ಷಗಳಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಯಾವ ರೀತಿಯಲ್ಲಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಪಘಾತವಾದಾಗ ಹಾಗೂ ತುರ್ತು ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡದ, ಮಂಗಳೂರು, ಮಣಿಪಾಲ, ಗೋವಾದಂತಹ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಈಗಲೂ ಇದೆ. ಅದೆಷ್ಟೋ ಜನರು ಆಸ್ಪತ್ರೆ ಸೇರುವ ಮೊದಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಕುಮಟಾದಲ್ಲಿ ಅನೇಕ ವರ್ಷಗಳಿಂದ ಅತ್ಯುತ್ತಮ ಸೇವೆ ನೀಡುತ್ತಿರುವ ಡಾ. ಶ್ರೀನಿವಾಸ ನಾಯಕ, ದೇವಾಡಿಗ ಮುಂತಾದ ವೈದ್ಯರನ್ನು ವರ್ಗಾವಣೆ ಮಾಡುವ ಆದೇಶವನ್ನು ಬೆಂಗಳೂರಿನಿಂದ ಹೊರಡಿಸಲಾಗಿದೆ. 

ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೆ ಉತ್ತರ ಕನ್ನಡದಲ್ಲಿ ಒಂದು ಮಲ್ಟಿ ಸ್ಪೆಷಲ್ಟಿ ಆಸ್ಪತ್ರೆ ನಿರ್ಮಾಣ ಸಾಧ್ಯವಾಗಲಿಲ್ಲ. ಯಾವುದೇ ಪಕ್ಷದವರು ಬಂದರೂ ಅದನ್ನು ರಾಜಕೀಯವಾಗಿ ಬಳಸಿಕೊಂಡರೆ ವಿನಃ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಲಿಲ್ಲ. ತಾಲೂಕಿನಲ್ಲಿ ಒಂದೋ ಎರಡೋ ಉತ್ತಮ ವೈದ್ಯರನ್ನು ದೇವರು ಕರುಣಿಸಿದ್ದ. ಇದೀಗ ಡಾ. ಗುಪ್ತ ಅವರು ಹತ್ತು ವರ್ಷಕ್ಕಿಂತ ಹೆಚ್ಚು ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ವರ್ಗಾವಣೆಗೆ ಆದೇಶಿಸಿದ್ದಾರೆ. ಸರಕಾರದ ಜೊತೆಗೆ ಚರ್ಚಿಸಿ ಆದೇಶ ಮಾಡಿದ್ದಾರೋ ಇಲ್ವೋ ತಿಳಿದಿಲ್ಲ. ಆದರೆ ಇದರಿಂದ ತಾಲೂಕಿನಲ್ಲಿರುವ ಉತ್ತಮ ವೈದ್ಯರು ಬೇರೆಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಜಾಗದಲ್ಲಿ ಅವರಿಗಿಂತ ಉತ್ತಮರನ್ನು ನಿಯೋಜನೆ ಮಾಡಿದರೆ ಸಮಸ್ಯೆ ಇಲ್ಲ. ಆದರೆ ಯಾರನ್ನು ನಿಯೋಜನೆ ಮಾಡುತ್ತಾರೆ ಇಲ್ಲವೋ ಎಂಬುದು ತಿಳಿದಿಲ್ಲ. ಹೀಗಾಗಿ ನಮ್ಮ ತಾಲೂಕಿಗೆ ಅನ್ಯಾಯವಾಗಲಿ ಖಂಡಿತವಾಗಿಯೂ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

 ಗಣೇಶ ಭಟ್ಟ ಮಾತನಾಡಿ, ಬಡವರ ಕಷ್ಟಗಳಿಗೆ ಸ್ಪಂದಿಸುವ ವೈದ್ಯರನ್ನು ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಮುಂದೆ ವೈದ್ಯರನ್ನು ನಿಯೋಜನೆ ಮಾಡಲಾಗುತ್ತದೆಯೋ? ಇಲ್ಲವೋ? ಎಂಬುದು ಸ್ಪಷ್ಟವಾಗಿಲ್ಲ. ನರ್ಸ್ ಗಳ ಕೊರತೆ ಇದೆ. ದಂತ ವೈದ್ಯರು ತಾವೇ ಉಪಕರಣಗಳನ್ನು ಶುಚಿ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಇಲ್ಲಸಲ್ಲದ ಆದೇಶ ಮಾಡಿದರೆ ಖಂಡಿತವಾಗಿಯೂ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಹರೀಶ ಶೇಟ್  , ಆನಂದು ಕವರಿ , ಸಂಪತ್ ಕುಮಾರ್ ನಾಯರಿ ಮಾತನಾಡಿದರು. ಜಗದೀಶ ಹರಿಕಾಂತ, ಶ್ರೀಧರ ಕಿಮಾನಿ, ಲೋಕೇಶ ನಾಯ್ಕ ಹಾಗೂ ಇತರ ಪ್ರಮುಖರು ಇದ್ದರು.