ವಿಜಯಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವವರೆಗೆ ಕೊಲ್ಹಾರ ತಾಲೂಕಿನ ಮುಳವಾಡ ಬಳಿಯ ಟೋಲ್ ವಸೂಲಿ ನಿಲ್ಲಿಸುವಂತೆ ಒತ್ತಾಯಿಸಿ ಜಿಲ್ಲಾ ಅನ್ನದಾತ ಯುವ ರೈತ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸುರೇಶ ಗರಸಂಗಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 218 ರ ಮುಳವಾಡ ಬಳಿ ಟೋಲ್ ನಾಕಾ ಸ್ಥಾಪಿಸಿ, ಪ್ರತಿ ವಾಹನದಿಂದ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಮುಳವಾಡ ಟೋಲ್ ಸಮೀಪದ ಹೊನಗನಹಳ್ಳಿ ರೈಲ್ವೆ ಗೇಟ್ ಬಳಿ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಅಲ್ಲಿನ ರಸ್ತೆ ಕಾಮಗಾರಿ ಸಹ ಕಳಪೆಯಾಗಿದ್ದು, ಜತೆಗೆ ಟೋಲ್‌ಗೇಟ್ ಬಳಿ ನಿಯಮದಂತೆ ಅವಶ್ಯವಾದ ಮೂಲ ಸೌಲಭ್ಯ, ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದರು.
ಈ ಕುರಿತು ಹಿಂದೆ ಎರಡು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿ ನಿರ್ಲಕ್ಷಿಸಿ ಟೋಲ್ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು. ರಸ್ತೆ ದುರಸ್ತಿ ಹಾಗೂ ಟೋಲ್ ನಾಕಾ ಬಳಿ ಮೂಲ ಸೌಲಭ್ಯಗಳನ್ನು ಕಲ್ಪಿಸಿ ನಂತರ ಸುತ್ತಮುತ್ತಲಿನ ಗ್ರಾಮಸ್ಥರು, ರೈತರ ಸಭೆ ಮಾಡಿದ ಬಳಿಕವೇ ಟೋಲ್ ಸಂಗ್ರಹಿಸಬೇಕು. ಅಲ್ಲಿವರೆಗೆ ಟೋಲ್ ವಸೂಲಾತಿ ಬಂದ್ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಕುಮಾರ ಕಿಳೆಗಾವಿ, ಪಾಂಡು ದಳವಾಯಿ, ಭರತೇಶ ಹಿಪ್ಪರಗಿ ಮತ್ತಿತರರಿದ್ದರು.