ದಾಂಡೇಲಿ: ಪಣಜಿ-ಬೆಳಗಾವಿ ಹೆದ್ದಾರಿಯಲ್ಲಿನ ಅನಮೋಡದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ವಾಹನಗಳ ಪ್ರವೇಶಕ್ಕೆ ಶುಲ್ಕ ಆಕರಿಸುತ್ತಿರುವುದನ್ನು ವಿರೋಧಿಸಿ ಜೊಯಿಡಾ ತಾಲೂಕಿನ ಕಾಳಿ ಬ್ರಿಗೇಡ್ ವತಿಯಿಂದ ನಗರದ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ ಸಿಂಧೆ ದೆವೋಬಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಅರಣ್ಯ ಇಲಾಖೆಯ ವನ್ಯಜೀವಿ ವಭಾಗದ ಪಿಸಿಸಿಎಫ್ ರಾಜೀವ ರಂಜನ ಪತ್ರದ ಪ್ರಕಾರ, ಕೆಲ ನಿಗದಿತ ಉದ್ದೇಶಗಳಿಗಾಗಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ ಶುಲ್ಕ ಭರಿಸಿ ಅಭಯಾರಣ್ಯವನ್ನು ಪ್ರವೇಶಿಸಲು ಅನುಮತಿ ನೀಡಬಹುದೆಂದು ತಿಳಿಸಲಾಗಿದೆ. ಆದರೆ, ನಿಗದಿತ ಉದ್ದೇಶ ಬಿಟ್ಟು ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲರಿಗೂ ಅನ್ವಯಿಸುವಂತೆ ಮಾಡಿರುವುದು ಸರಿಯಲ್ಲ. ಇದು ಅನಧಿಕೃತ ಶುಲ್ಕವಾಗುತ್ತದೆ. ತಕ್ಷಣ ಶುಲ್ಕ ವಸೂಲಿ ತಕ್ಷಣ ನಿಲ್ಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ನಿಲೇಶ ಸಿಂಧೆ, ರಾಜ್ಯ ಮಟ್ಟದಲ್ಲಿ ವನ್ಯ ಜೀವಿ ವಿಭಾಗದ ಆದೇಶದಂತೆ ಕ್ರಮ ಕೈಕೊಳ್ಳಬೇಕಾಗುತ್ತದೆ. ಸ್ಥಳೀಯರಿಗೆ ರಿಯಾಯಿತಿ ಕುರಿತು ಮೇಲಧಿಕಾರಿಗಳೊಂದಿದೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಚಾಲಕ ಸುನಿಲ ದೇಸಾಯಿ ನೇತೃತ್ವದಲ್ಲಿ ಸಮಿತಿಯ ಅಧ್ಯಕ್ಷ ಉಮೇಶ ವೇಳಿಪ, ಕಾರ್ಯದರ್ಶಿ ಸಮೀರ ಮುಜಾವರ, ನಾರಾಯಣ ಹೆಬ್ಬಾರ, ಸತೀಶ ನಾಯ್ಕ, ಪ್ರಭಾಕರ ನಾಯ್ಕ, ಕಿರಣ ನಾಯ್ಕ, ದಿನೇಶ ದೇಸಾಯಿ,, ಜಯರಾಮ ಇದ್ದರು.