ಜಿಲ್ಲೆ

ಕಂದಾಯ ಬಡಾವಣೆ ತೆರವಿಗೆ ವಿರೋಧ, ನೆಲಮಂಗಲದಲ್ಲಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ಆದೇಶ ಮರುಪರಿಶೀಲಿಸಲು ಮನವಿ

Bengaluru Rural

ನೆಲಮಂಗಲ: ತಾಲೂಕಿನಾದ್ಯಂತ ನಡೆಯುತ್ತಿರುವ ಕಂದಾಯ ವ್ಯಾಪ್ತಿಯ ಬಡಾವಣೆ ತೆರವು ಕಾರ್ಯ ಸ್ಥಗಿತ ಮಾಡುವಂತೆ ಆಗ್ರಹಿಸಿ ತಾಲೂಕು ಕಚೇರಿ ಆವರಣಲ್ಲಿ ಸೋಮವಾರ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಎಂಎಲ್ಸಿ ಬಿ.ಎಂ.ಎಲ್.ಕಾಂತರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಂದಾಯ ನಿವೇಶನದಾರರು ತಹಸೀಲ್ದಾರ್ ಎಂ. ಶ್ರೀನಿವಾದ್‌ಗೆ ಮನವಿ ಸಲ್ಲಿಸಿದರು.

ರೆವಿನ್ಯೂ ಬಡಾವಣೆಗಳಲ್ಲಿನ ನಿವೇಶನ ನೋಂದಣಿಗೆ ಅವಕಾಶ ಕಲ್ಪಿಸಿರುವ ಸರ್ಕಾರವೇ ಕಂದಾಯ ಅಧಿಕಾರಿಗಳ ಮೂಲಕ ಬಡಾವ ತೆರವಿಗೆ ಮುಂದಾಗಿರುವುದು ಸರಿಯಲ್ಲ. ಇದರಿಂದ ಬಡಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

ಜನವಿರೋಧಿ ಕ್ರಮಗಳ ಕೈಗೊಳ್ಳುವ ಮುನ್ನ ಸ್ಥಳೀಯ ಜನಪ್ರತಿನಿಧಿಗಳ ಬಳಿ ಚರ್ಚಿಸಬೇಕು. ಆದ್ದರಿಂದ ಕೂಡಲೇ ಬಡಾವಣೆ ತೆರವು ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಈ ಬಗ್ಗೆ ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯ ಬಿ.ಎಂ.ಎಲ್. ಕಾಂತರಾಜು ಮಾತನಾಡಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಬಡಾವಣೆಗಳಲ್ಲಿನ ನಿವೇಶನಗಳನ್ನು ಬಡಮಧ್ಯಮ ವರ್ಗದ ಜನ ಖರೀದಿಸಲು ಶಕ್ತರಿಲ್ಲದ ಕಾರಣ ರೆವಿನ್ಯೂ ಬಡಾವಣೆಗಳಲ್ಲಿ ನಿವೇಶನ ಖರೀದಿ ಮಾಡುತ್ತಿದ್ದಾರೆ ಎಂದರು.

ಆದಾಯದ ಹೆಸರಲ್ಲಿ ರೆವಿನ್ಯೂ ನಿವೇಶಗಳ ನೋಂದಣಿಗೆ ಸರ್ಕಾರವೇ ಪರೋಕ್ಷವಾಗಿ ಸಾಕಾರ ಮಾಡುತ್ತಿದೆ. ಮತ್ತೊಂದೆಡೆ ರೆವಿನ್ಯೂ ಬಡಾವಣೆಗಳಿಗೆ ಬೆಸ್ಕಾಂನಿಂದ ವಿದ್ಯುತ್ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೃಷಿಭೂಮಿಯಲ್ಲಿ ಬಡಾವಣೆಗಳನ್ನು ಅನಧಿಕೃತವೆಂದು ಪರಿಗಣಿಸಿ ತೆರವುಗೊಳಿಸುತ್ತಿರುವ ಕಂದಾಯ ಅಧಿಕಾರಿಗಳ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ರೆವಿನ್ಯೂ ಬಡಾವಣೆಗಳನ್ನು ತೆರವುಗೊಳಿಸಿ ಬಡ ವರ್ಗದ ಜನರನ್ನು ಒಕ್ಕೆಲೆಬ್ಬಿಸುವ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿಗಳು ಕೈಬಿಡಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅನಧಿಕೃತ ಬಡಾವಣೆ ತೆರವಿಗೆ ಮುಂದಾಗಿರುವ ಕಂದಾಯ ಅಧಿಕಾರಿಗಳು ಸಣ್ಣಪುಟ್ಟ ಡೆವಲಪರ್ಸ್‌ಗಳ ಬಡಾವಣೆಗಳನ್ನು ತೆರವುಗೊಳಿಸುತ್ತಿದ್ದಾರೆ. ಆದರೆ ಕೆಲ ಪಟ್ಟ ಭದ್ರರ ಬಡಾವಣೆ, ಡೆವಲಪರ್‌ಗಳ ಬಡಾವಣೆಗಳನ್ನು ತೆರವುಗೊಳಿಸಿಲು ಕೈಹಾಕಿಲ್ಲ, ಬಡಾವಣೆ ತೆರವು ಹೆಸರಿನಲ್ಲಿ ಲಕ್ಷಾಂತರ ಹಣದ ಲೂಟಿಗೆ ಮುಂದಾಗಿದ್ದಾರೆ ಎಂದು ನಿವೇಶನ ಖರೀದಿದಾರರು ಆರೋಪಿಸಿದರು. ಟಿಎಪಿಎಂಎಸ್ ನಿರ್ದೇಶಕ ಪಿಳ್ಳಪ್ಪ, ನಗರಸಭೆ ಸದಸ್ಯ ಅಂಜನಮೂರ್ತಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ, ಮುಖಂಡರಾದ ಸಂಪತ್‌ಬಾಬು, ಕೆ.ರಂಗನಾಥ್, ಮುನರಾಮಯ್ಯ, ಗಂಗರಾಜು, ಕಾಸರಘಟ್ಟಸುರೇಶ್, ಜಯರಾಮ್, ಕುಂಬಾರ ಸಂಘದ ಅಧ್ಯಕ್ಷ ಹನುಮಂತರಾಜು ಮತ್ತಿತರರು ಉಪಸ್ಥಿತರಿದರು.

ಮೇಲಧಿಕಾರಿಗಳ ನಿರ್ದೇಶನದಂತೆ ಕಾರ್ಯಾಚರಣೆ: ಕೃಷಿಭೂಮಿಯಲ್ಲಿ ಅನಧಿಕೃತ ನಿರ್ಮಾಣ ಮಾಡಿರುವ ವಸತಿ ಬಡಾವಣೆಗಳ ತೆರವು ಮಾಡಲು ಗ್ರಾಮಾಂತರ ಜಿಲ್ಲಾಧಿಕಾರಿಗಳು ನೀಡಿರುವ ನಿರ್ದೇಶನದಂತೆ ತಾಲೂಕಿನ ಕೆಲವೆಡೆ ಬಡಾವಣೆ ತೆರವುಗೊಳಿಸಲಾಗುತ್ತಿದೆ. ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಮುಂದಿನ ಕಾರ್ಯ ಕೈಗೊಳ್ಳಲಾಗುವುದು. ಹಣ ಪಡೆದು ಬಡಾವಣೆ ತೆರವು ಮಾಡದೆ ಇರುವ ಅಧಿಕಾರಿ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಎಂ.ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದರು.