ಜಿಲ್ಲೆ

ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ವಿರೋಧ

ಹಾರೋಹಳ್ಳಿ : ಮೆಟ್ರೋ ಪ್ರಯಾಣ ದರ ಹೆಚ್ಚಳ ಖಂಡಿಸಿ ನೈಸ್ ರಸ್ತೆಯ ಬಳಿ ಕನ್ನಡಪರ ಸಂಘಟನೆ ಹಾಗೂ ರೈತ ಪರ ಸಂಘಟನೆಗಳ ಮುಖಂಡರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಮೆಟ್ರೋ ಪ್ರಯಾಣದರ ಹೆಚ್ಳದಿಂದ ಬಡವರನ್ನು ಮೆಟ್ರೋದಿಂದ ದೂರ ಇರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸಮಯವನ್ನು ಉಳಿಸುವುದರಿಂದ ಎಲ್ಲ ವರ್ಗದ ಜನರು ಪ್ರಯಾಣದತ್ತ ಮೆಟ್ರೊ ಆಕರ್ಶಿತರಾಗಿದ್ದಾರೆ. ಆದರೆ, ಜನರ ಸಂಖ್ಯೆಗೆ ಅನುಗುಣವಾಗಿ ಬೋಗಿ ಹೆಚ್ಚಿಸಿ ಅಥವಾ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿ ಪ್ರೊತ್ಸಾಹಿಸಬೇಕಾದ ಸರ್ಕಾರ ದರ ಏರಿಕೆಯ ಮೂಲಕ ಬಡವರು, ಮಧ್ಯಮ ವರ್ಗದವರನ್ನು ಮೆಟ್ರೋದಿಂದ ದೂರ ಇರಿಸಿ ಶ್ರೀಮಂತ ವರ್ಗವನ್ನು ತೃಪ್ತಿಪಡಿಸಲು ಹೊರಟಿದೆ. ಜನರ ಬೆವರಿನ ತೆರಿಗೆ ಹಣದಿಂದ ನಿರ್ಮಿಸಿರುವ ನಮ್ಮ ಮೆಟ್ರೋ ಜನರ ರಕ್ತ ಹೀರಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ರೂಪೇಶ್ ರಾಜಣ್ಣ ಮಾತನಾಡಿ, ಪ್ರತಿ ವರ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದನ್ನು ಬಿಎಂಆರ್‌ಸಿಎಲ್ ಘೋಷಿಸುತ್ತಿದೆ. ಆದರೆ, ಮೆಟ್ರೋವನ್ನು ಲಾಭದಾಯಕ ಉದ್ಯಮವಾಗಿ ಪರಿಗಣಿಸಿ ದುಪ್ಪಟ್ಟು ದರ ನಿಗದಿಪಡಿಸಿರುವುದು ಹಗಲು ದರೋಡೆಯಂತಿದೆ ಎಂದು ಅಭಿಪ್ರಾಯಪಟ್ಟರು.

ರೈತರು ಕುರಿ, ಮೇಕೆ, ರಾಗಿ, ಅಕ್ಕಿ , ಹುಲ್ಲುಗಳನ್ನು ಹೊತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡು, ನಾವು ಬೆಳೆದದನ್ನು ತೆಗೆದುಕೊಂಡು ಜನರ ಮೇಲೆ ವಿಧಿಸಿರುವ ದರವನ್ನು ಕಡಿಮೆ ಮಾಡಿ ಎಂದು ಘೋಷಣೆ ಕೂಗಿದರು.