ಮಡಿಕೇರಿ: ಕೊಡಗಿನ ಪರಿಸರಕ್ಕೆ ಮಾರಕವಾಗಿರುವ ಬೃಹತ್ ಲೇಔಟ್ ಹಾಗೂ ಮೆಗಾ ಟೌನ್‌ಶಿಪ್‌ಗಳಿಗಾಗಿ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಡಂಗದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು.
ಜನಜಾಗೃತಿಯ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕರ್ನಾಟಕ ಭೂ ಸುಧಾರಣಾ ಕಾಯ್ದೆ ೨೦೨೦-೨೧ರ ಲೋಪದೋಷಗಳ ದುರ್ಲಾಭ ಪಡೆದು ಕರ್ನಾಟಕದ ೨೯ ಜಿಲ್ಲೆಗಳ, ಭಾರತದ ೨೯ ರಾಜ್ಯಗಳ ಮತ್ತು ೮ ಕೇಂದ್ರಾಡಳಿತ ಪ್ರದೇಶಗಳ, ಜಗತ್ತಿನ ೧೯೩ ದೇಶಗಳ ರಾಜಕಾರಣಿಗಳು, ಅಧಿಕಾರಶಾಹಿಗಳು ಹಾಗೂ ಆರ್ಥಿಕ ಅಪರಾಧಿಗಳು ಕೊಡವ ಲ್ಯಾಂಡ್‌ನಲ್ಲಿ ಬೇನಾಮಿ ಆಸ್ತಿಯನ್ನು ಹೊಂದಿದ್ದು, ಈ ಪವಿತ್ರ ನೆಲೆ, ನೆಲ, ಜಲಮೂಲ ಮತ್ತು ಪ್ರಕೃತಿಯನ್ನು ಲೂಟಿಮಾಡಿ ಕೊಳ್ಳೆ ಹೊಡೆಯುತ್ತಿದ್ದಾರೆ. ಮುಂದೊಂದು ದಿನ ಕಡಿಯತ್ ನಾಡಿನ ಪವಿತ್ರ ಮಲೆತಿರಿಕೆ ದೇವ ನೆಲೆಯ ಕುಂದ್ ಹಾಗೂ ಮನಮೋಹಕ ಚೋಮ ಕುಂದ್ ಮತ್ತು ನಯನ ಮನೋಹರ ಬೆಪ್ಪುನಾಡಿನ ಅಸ್ಮಿತೆ ಉಳಿಯುವುದಿಲ್ಲವೆಂದು ಅವರು ಆತಂಕ ವ್ಯಕ್ತಪಡಿಸಿದರು.
ಕೊಡವ ಲ್ಯಾಂಡ್‌ನ ಉಳಿವಿಗಾಗಿ ಆದಿಮಸಂಜಾತ ಕೊಡವರ ಭೂಮಿಗೆ ಶಾಸನ ಬದ್ಧ ಭದ್ರತೆಯನ್ನು ಕಲ್ಪಿಸುವುದು, ಆದಿಮಸಂಜಾತ ಕೊಡವರ ಸಂಸ್ಕೃತಿ, ಪರಂಪರೆ ಪೂರ್ವಾರ್ಜಿತ ಆಸ್ತಿ ರಕ್ಷಣೆಗೆ ಸ್ವಯಂ ನಿರ್ಣಯದ ಹಕ್ಕು, ಕೊಡವ ಲ್ಯಾಂಡ್ ಮತ್ತು ಎಸ್.ಟಿ ಸ್ಥಾನಮಾನ ಸ್ಥಾಪಿಸಬೇಕಾಗಿದೆ ಎಂದರು.
ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಬೂಸ್ಟ್ ಮಾಡುವುದಾಗಿ ಜಿಲ್ಲಾಡಳಿತ ಹೇಳಿಕೆ ನೀಡುತ್ತಿದೆ. ಪ್ರವಾಸೋದ್ಯಮದ ಬೆಳವಣಿಗೆ ಎಂದರೆ ಹಸಿರ ಬೆಟ್ಟಗುಡ್ಡಗಳನ್ನು ಕಡಿದು ಜಲನಾಳಗಳನ್ನು ನಾಶಪಡಿಸುವುದೇ ಎನ್ನುವುದನ್ನು ಶ್ವೇತಪತ್ರದ ಮೂಲಕ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಸಾವಿರಾರು ಮರಗಳು ಹನನವಾಗುತ್ತಿವೆ, ಜಲನಾಳಗಳು ನಾಶವಾಗುತ್ತಿವೆ. ಭಾರೀ ಸ್ಫೋಟಕಗಳನ್ನು ಬಳಸಿ ಭೂಗರ್ಭಕ್ಕೆ ಹಾನಿ ಮಾಡಲಾಗುತ್ತಿದೆ. ಪ್ರಾಕೃತಿಕ ವಿಕೋಪದ ಅಪವಾದಗಳನ್ನು ಅಮಾಯಕ ಕೊಡವರ ಮೇಲೆ ಹಾಕಲಾಗುತ್ತಿದೆ. ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್ ನ್ನು ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದೆಂದು ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದರು.
ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೋಡಿರ ವಿನೋದ್, ಪಾಂಡಂಡ ಕಿಟ್ಟು, ಮಾತಂಡ ಕಂಬು ಉತ್ತಯ್ಯ, ಬಲ್ಲಚಂಡ ರವಿ, ಬಲ್ಲಚಂಡ ರಾಮಕೃಷ್ಣ, ಬೋಳಕಾರಂಡ ತಿಲಕ್, ಕೋದಂಡ ಸುರ, ಪಾಂಡಂಡ ಸುಧಿ, ಉದಿಯಂಡ ಚೆಂಗಪ್ಪ, ಚಂಬಂಡ ಜನತ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಚೊಳಂಡ ವಿಜು, ಪಾಂಡಂಡ ತೇಜ, ಬಲ್ಟಿಕಾಳಂಡ ರಂಜಿ, ಬಲ್ಟಿಕಾಳಂಡ ರಾಯ್ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ಸಿಎನ್‌ಸಿ ಬೇಡಿಕೆಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.