ಜಿಲ್ಲೆ

ಉರ್ದು ಕಡ್ಡಾಯಗೊಳಿಸಿದ್ದಕ್ಕೆ ವಿರೋಧ

ಎಸ್.ಎನ್.ರವೀಂದ್ರ

ಮೂಡಿಗೆರೆ: ಪಟ್ಟಣ ಪಂಚಾಯಿತಿ 5ನೇ ವಾರ್ಡ್‌ನ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕಾತಿ ವೇಳೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿ ಅರ್ಜಿ ಆಹ್ವಾನಿಸಿದ್ದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಕಸಾಪ ಪದಾಧಿಕಾರಿಗಳು ಶಿಶು ಅಭಿವೃದ್ಧಿ ಇಲಾಖೆ ಕಚೇರಿಗೆ ತೆರಳಿ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿದರು. ಹಿರಿಯ ಅಧಿಕಾರಿಗಳು ಕಚೇರಿಗೆ ಗೈರಾಗಿದ್ದರಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಉರ್ದು ಭಾಷೆ ಬಲ್ಲ ಕಾರ್ಯಕರ್ತರಿಂದ ಅರ್ಜಿ ಆಹ್ವಾನಿಸಿರುವುದು ಕನ್ನಡಕ್ಕೆ ಮಾಡಿದ ಅಪಮಾನ. ಈ ನಿರ್ಧಾರ ಕೈಬಿಟ್ಟು ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಗೌಡ ಒತ್ತಾಯಿಸಿದರು.
ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ರಘು, ಅಂಗನವಾಡಿ ಇರುವ ಪ್ರದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದವರು ಇದ್ದಾರೆ. ಆದರೆ ಹುದ್ದೆ ಬಯಸುವವರು ಕಡ್ಡಾಯವಾಗಿ ಉರ್ದು ಕಲಿತಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಒಂದು ಕೋಮಿಗೆ ಹುದ್ದೆ ನೀಡಲು ನಡೆಸಿದ ಹುನ್ನಾರದ ಸಾಧ್ಯತೆ ಇದೆ. ಇಂಥ ನಿರ್ಧಾರ ಕೈಗೊಂಡಿರುವ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಯನ್ನು ಅಮಾನತುಗೊಳಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.