ಜಿಲ್ಲೆ

ಮೈಷುಗರ್ ಶಾಲೆ ಗುತ್ತಿಗೆಗೆ ಬೇಡ: ಹಿರಿಯ ವಿದ್ಯಾರ್ಥಿ ಕೆ.ಬೋರಯ್ಯ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಷುಗರ್ ಪ್ರೌಢಶಾಲೆಯನ್ನು ಉಚಿತವಾಗಿ ಗುತ್ತಿಗೆ ನೀಡುವ ನಿರ್ಧಾರ ಸರಿಯಲ್ಲ. ಬದಲಿಗೆ ಮೈಷುಗರ್ ಕಂಪನಿ ಮತ್ತು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಮೊದಲಿನಂತೆಯೇ ನಿರ್ವಹಣೆ ಮಾಡಬೇಕು ಎಂದು ಮೈಷುಗರ್ ಹೈಸ್ಕೂಲ್ ವೆಲ್‌ಫೇರ್ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಸದಸ್ಯ ಮತ್ತು ಹಿರಿಯ ವಿದ್ಯಾರ್ಥಿ ಕೆ.ಬೋರಯ್ಯ ಸಲಹೆ ನೀಡಿದರು.

ಖಾಸಗಿಯವರಿಗೆ ಗುತ್ತಿಗೆ ನೀಡುವ ಬದಲು ಮೈಷುಗರ್ ಕಂಪನಿಯು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಜತೆಗೂಡಿ ಸ್ವಂತಿಕೆಯಲ್ಲಿ ಶಾಲೆ ನಡೆಸುವುದು ಸೂಕ್ತ. ಕಂಪನಿಗೆ ಕಬ್ಬು ಸರಬರಾಜು ಮಾಡುವ ರೈತರ ಬಿಲ್‌ನಲ್ಲಿ ಪ್ರತಿ ಟನ್‌ಗೆ 4 ರೂ, ಕಂಪನಿಯಿಂದ 4 ರೂ ಸೇರಿ 8 ರೂಗಳ ವಂತಿಕೆ ಹಣದಲ್ಲಿ ಟ್ರಸ್ಟ್ ರಚನೆ ಮಾಡಿ ಶಾಲೆ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಕಾರ್ಖಾನೆ ಕಳೆದ 10 ವರ್ಷದಿಂದ ಸರಿಯಾಗಿ ಕಬ್ಬು ನುರಿಸದೇ ಇರುವುದರಿಂದ ತೊಂದರೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಿರಿಯ ವಿದ್ಯಾರ್ಥಿಗಳು ಸಂಘ ರಚಿಸಿ 40 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ರಿಪೇರಿ, ಬಣ್ಣ, ಅವಶ್ಯ ವಸ್ತುಗಳನ್ನು ದಾನವಾಗಿ ನೀಡುತ್ತಾ ಬರಲಾಗುತ್ತಿದೆ. ಭಾರತ್ ಪೆಟ್ರೋಲಿಯಂ ವತಿಯಿಂದ 60 ಲಕ್ಷ ರೂ ವೆಚ್ಚದಲ್ಲಿ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಿಸಿಕೊಡಲಾಗಿದೆ. ಇದರ ಹೊರತಾಗಿ ಯಾವುದೇ ವಂತಿಗೆ ಪಡೆಯದೇ ರೈತರ ಮತ್ತು ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಪ್ರೌಢಶಾಲೆಯ 8ನೇ ತರಗತಿಯಲ್ಲಿ 28, 9ನೇ ತರಗತಿಯಲ್ಲಿ 30, 10ನೇ ತರಗತಿಯಲ್ಲಿ 30 ವಿದ್ಯಾರ್ಥಿಗಳಿದ್ದಾರೆ. ಶಾಲೆ ಸುಸ್ಥಿತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಇತ್ತೀಚೆಗಷ್ಟೇ ಶಾಲೆಯ ಅಮೃತ ಮಹೋತ್ಸವ ನಡೆಸಲಾಗಿದೆ. ಪ್ರೊ.ಕೃಷ್ಣೇಗೌಡ ಅವರ ಮನವಿ ಮೇರೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಾಲೆಯ ಅಭಿವೃದ್ದಿಯ ಭರವಸೆ ನೀಡಿದ್ದು, ಚುಂಚಶ್ರೀಗಳು ಒಮ್ಮತದ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಿರುವಾಗ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಅವರು 15 ವರ್ಷಕ್ಕೆ ಪ್ರೌಢಶಾಲೆಯನ್ನು ಉಚಿತವಾಗಿ ಚೈತನ್ಯ ಎಜುಕೇಷನ್ ಟ್ರಸ್ಟ್‌ಗೆ ಗುತ್ತಿಗೆ ನೀಡಿರುವುದು ಸರಿಯಲ್ಲ. ಶಾಲೆಗೆ ಸೇರಿದ 15 ಎಕರೆ ಜಮೀನು, 28 ಕೊಠಡಿ ಇದೆ. ಬಹುಶಃ ಅದನ್ನು ಕಬಳಿಸುವ ಹುನ್ನಾರವಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಟಿ.ಜಯರಾಂ, ಕಾರ್ಯದರ್ಶಿ ಡಾ.ಕೆ.ಎಂ.ಶಿವಕುಮಾರ್, ಉಪಾಧ್ಯಕ್ಷ ಎಸ್.ಸಿ.ಸತ್ಯನಾರಾಯಣ್‌ದೇವ್, ಸದಸ್ಯರಾದ ಇಂಡುವಾಳು ಚಂದ್ರಶೇಖರ್, ಸಂತೋಷ್ ಇದ್ದರು.