ಜಿಲ್ಲೆ

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ವಿರೋಧ

ರೇಷ್ಮೆ ನಗರ ಡೆಸ್ಕ್

ಕನಕಪುರ: ನಟ ಕಮಲಹಾಸನ್ ಅವರ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಕನ್ನಡ ಹಾಗೂ ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಚನ್ನಬಸಪ್ಪ ವೃತ್ತದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಯಿತು.

ಹಿಂದು ಪರ ಸಂಘಟನೆಯ ಎ.ಪಿ.ಕೃಷ್ಣಪ್ಪ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಪಂಚದ ಎಲ್ಲ ಭಾಷೆಗಳು ಕನ್ನಡ ಮತ್ತು ಸಂಸ್ಕೃತ ಭಾಷೆಯಿಂದ ಹುಟ್ಟಿವೆ. ರಾಮಾಯಣ, ಮಹಾಭಾರತದ ಇತಿಹಾಸದಲ್ಲಿ ಕರುನಾಡ ವೈಭವ ಎದ್ದು ಕಾಣುತ್ತಿದ್ದರೂ, ನಟ ಕಮಲ್ ಹಾಸನ್ ಕನ್ನಡ ತಮಿಳು ಭಾಷೆಯಿಂದ ಹುಟ್ಟಿದೆ ಎಂದು ನಾಡಿಗೆ ಅಪಚಾರ ಮಾಡಿದ್ದಾರೆ ಎಂದು ಕಮಲ ಹಾಸನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ಕರ್ನಾಟಕ ಸ್ವತಂತ್ರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಮಾತನಾಡಿ, ತಮಿಳು ನಟ ಕಮಲ್ ಹಾಸನ್ ಕ್ಷಮೆ ಕೇಳಬೇಕು. ಜತೆಗೆ ಅವರು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಕಾಲಿಡದಂತೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.