ಜಿಲ್ಲೆ

ದಸರಾ ಆಹಾರ ಮೇಳ ಮಳಿಗೆ ಹೆಚ್ಚಳಕ್ಕೆ ವಿರೋಧ

ಆರ್.ಕೃಷ್ಣ ಮೈಸೂರು
ದಸರಾದ ಆಕರ್ಷಣೆಯಲ್ಲಿ ಒಂದಾದ ಆಹಾರ ಮೇಳದಲ್ಲಿ ಈ ಬಾರಿ ಮಳಿಗೆ ಹೆಚ್ಚಳ ಮಾಡುವುದಕ್ಕೆ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾಗಿದೆ.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸುವ ಆಹಾರ ಮೇಳದಲ್ಲಿ ಮಳಿಗೆಗಳನ್ನು ಹೆಚ್ಚಳ ಮಾಡುವುದರಿಂದ ಜಾಗ ಮತ್ತಷ್ಟು ಕಿಷ್ಕಿಂಧೆಯಾಗುತ್ತದೆ ಎನ್ನುವ ದೂರಿದೆ.
ಈ ಬಾರಿ 175 ಮಳಿಗೆಗಳನ್ನು ಒಂದೇ ಕಡೆ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಇದರಿಂದ ಮೊದಲೇ ಕಿರಿದಾಗಿರುವ ಮಳಿಗೆಗಳನ್ನು ಮತ್ತಷ್ಟು ಕಿರಿದಾಗಿಸಿದಂತಾಗುತ್ತದೆ. ಅಲ್ಲದೇ ಆಹಾರ ಮೇಳಕ್ಕೆ ಹೆಚ್ಚಿನ ಜನರು ಆಗಮಿಸುವುದರಿಂದ ವಾಹನಗಳ ಪಾರ್ಕಿಂಗ್ ಸಮಸ್ಯೆಯೂ ತಲೆದೋರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಳಿಗೆ ಹೆಚ್ಚಳ ಮಾಡಬಾರದು ಎಂದು ಮೈಸೂರು ದಸರಾ ಆಹಾರ ಮೇಳ ತಿಂಡಿ, ತಿನಿಸುಗಳ ಮಾರಾಟಗಾರರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಮೈದಾನದಲ್ಲಿ ಆಹಾರ ಮೇಳ ಮಾಡುವ ಬದಲು ನಗರದ ವಿವಿಧೆಡೆ ಆಹಾರ ಮೇಳ ಆಯೋಜಿಸಬೇಕು. ಇದರಿಂದ ಜನರಿಗೆ ಸಮೀಪದಲ್ಲಿಯೇ ತಮ್ಮಿಚ್ಚೆಯ ಆಹಾರ ಸವಿಯಬಹುದು. ಅಲ್ಲದೆ ಮಾರಾಟಗಾರರಿಗೂ ಹೆಚ್ಚಿನ ಅವಕಾಶ ನೀಡಿದಂತಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ.
ನಗರದ ಕಾರಂಜಿಕೆರೆ ಪಕ್ಕ ಇರುವ ಮೈಸೂರು ಅರಸರಿಗೆ ಸೇರಿದ ಸರ್ಕಸ್ ನಡೆಯುವ ಜಾಗದಲ್ಲಿ ಮತ್ತೊಂದು ಆಹಾರ ಮೇಳ ಆಯೋಜಿಸಲು ಸೂಕ್ತವಿದೆ. ಸುಮಾರು 50ರಷ್ಟು ಮಳಿಗೆ, ವಾಹನಗಳ ಪಾರ್ಕಿಂಗ್‌ಗೆ ಜಾಗವೂ ದೊರೆಯುತ್ತದೆ. ಆದ್ದರಿಂದ ರಾಜವಂಶಸ್ಥರಿಗೆ ಮನವಿ ಸಲ್ಲಿಸಿ ಆಹಾರ ಮೇಳಕ್ಕೆ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ದಸರಾ ಉಪಸಮಿತಿಗಳನ್ನು ಮುಂಚಿತವಾಗಿ ನೇಮಕ ಮಾಡಬೇಕು. ಅಧಿಕಾರಿಗಳು ಸಭೆ ನಡೆಸುವಾಗ ಸಂಘದವರಿಗೆ ಆಹ್ವಾನ ನೀಡಿ ಮುಕ್ತವಾಗಿ ಚರ್ಚಿಸಬೇಕು. ಹಾಗೆಯೇ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಹೊರ ಜಿಲ್ಲೆ, ರಾಜ್ಯಗಳ ವ್ಯಾಪಾರಸ್ಥರಿಗೆ ಅವಕಾಶ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಬಾಡಿಗೆ ಕಡಿಮೆ ಮಾಡಲು ಆಗ್ರಹ:
ಜನಾಕರ್ಷಣೆಯ ದಸರಾ ಆಹಾರ ಮೇಳದಲ್ಲಿ ವರ್ಷದಿಂದ ವರ್ಷಕ್ಕೆ ಮಳಿಗೆಗಳ ಬಾಡಿಗೆಯನ್ನು ದಸರಾ ಮಹೋತ್ಸವ ಸಮಿತಿ ಹೆಚ್ಚಳ ಮಾಡಿಕೊಂಡು ಬರುತ್ತಿದೆ. ಆದರೆ ಈ ಹೆಚ್ಚಳ ವ್ಯಾಪರಸ್ಥರಿಗೆ ಅಲ್ಲದೆ ಗ್ರಾಹಕರಿಗೂ ಹೊರೆಯಾಗುತ್ತಿದೆ. ಆದ್ದರಿಂದ ದರ ಏರಿಕೆ ಮಾಡಬಾರದು ಎಂದು ವ್ಯಾಪಾರಸ್ಥರ ಸಂಘ, ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.
ದರ ಏರಿಕೆ ಮಾಡಿದರೆ ಆಹಾರದ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಬೇಕಾಗುತ್ತಿದೆ. ಇದರಿಂದ ಆಹಾರ ಮೇಳದಲ್ಲಿನ ವೈವಿಧ್ಯಮಯ ಆಹಾರ ಸವಿಯಲು ಬರುವ ಗ್ರಾಹಕರು ದುಬಾರಿ ಬೆಲೆ ತೆರಬೇಕಾಗುತ್ತದೆ. ಹೆಚ್ಚು ಹಣ ಬರುತ್ತದೆ ಎನ್ನುವ ಕಾರಣಕ್ಕೆ ಈ ಬಾರಿ ಮಳಿಗೆಗಳನ್ನು ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ಜಿಲ್ಲಾಡಳಿತಕ್ಕೆ ಹಣ ಬಂದರೂ, ಜನರು, ವ್ಯಾಪಾರಸ್ಥರ ಜೇಬಿಗೆ ಬರೆ ಎಳೆದಂತಾಗುತ್ತದೆ.
ವ್ಯಾಪಾರಸ್ಥರು ನಷ್ಟ ಅನುಭವಿಸಬೇಕಾಯಿತು:
2019ರಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ, ಕಾರ್ಯಕರ್ತರು ಮತ್ತು ಆಹಾರ ಮೇಳದ ಸಮಿತಿ ಸದಸ್ಯರ ಸಲಹೆ ಮೇರೆಗೆ ಸಸ್ಯಹಾರಕ್ಕೆ 25,000 ರೂ., ಮಾಂಸಾಹಾರಕ್ಕೆ 30,000 ರೂ. ನಿಗದಿಪಡಿಸಿದರು. ಆದರೆ ಕಳೆದ ಬಾರಿ ರಾಜ್ಯದಲ್ಲಿ ಬರವಿದ್ದ ಹಿನ್ನೆಲೆಯಲ್ಲಿ ಆಹಾರ ಮಳಿಗೆಗಳ ಬಾಡಿಗೆಯನ್ನು ಸಸ್ಯಹಾರಿ ವಿಭಾಗದಲ್ಲಿ 59,000 ರೂ., ಮಾಂಸಹಾರಿ ವಿಭಾಗದ ಮಳಿಗೆಗೆ 88,500 ರೂ. ಜಿಎಸ್‌ಟಿ ಸೇರಿದಂತೆ ನಿಗದಿಪಡಿಸಲಾಗಿತ್ತು. ಈ ದರ ಏರಿಕೆಯಿಂದಾಗಿ ಹೆಚ್ಚು ವ್ಯಾಪಾರವಾಗದ ಪರಿಣಾಮ ವ್ಯಾಪಾರಸ್ಥರು ನಷ್ಟ ಅನುಭವಿಸಬೇಕಾಯಿತು. ಈಗ ಮತ್ತೆ ದರ ಏರಿಕೆ ಮಾಡಲು ಮುಂದಾಗಿರುವುದು ಸರಿಯಲ್ಲ ಎನ್ನುವ ಆಕ್ಷೇಪ ಕೇಳಿ ಬಂದಿದೆ.

ಜನರಿಗೆ ಕಡಿಮೆ ಬೆಲೆಗೆ ತಮ್ಮಿಚ್ಚೆಯ ತಿಂಡಿ, ತಿನಿಸು ಸವಿಯಲು ಅವಕಾಶವಾಗುವಂತೆ ಮಳಿಗೆ ದರವನ್ನು ಹಿಂದಿನ ವರ್ಷದಂತೆ 25 ಹಾಗೂ 30 ಸಾವಿರ ರೂ.ಗೆ ನಿಗದಿ ಮಾಡಬೇಕು. ಜತೆಗೆ ನಗರದ ವಿವಿಧ ಸ್ಥಳದಲ್ಲಿ ಆಹಾರ ಮೇಳ ಮಳಿಗೆ ತೆರೆದು ಹೆಚ್ಚಿನ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಲಾಟರಿ ವ್ಯವಸ್ಥೆಗೆ ಸಂಘದ ವಿರೋಧ

ದಸರಾ ಆಹಾರ ಮಳಿಗೆದಾರರನ್ನು ಈ ಬಾರಿ ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಇದರಿಂದ ಹಲವು ವರ್ಷದಿಂದ ಆಹಾರ ಮೇಳದಲ್ಲಿ ಭಾಗವಹಿಸಿಕೊಂಡು ಬರುತ್ತಿರುವವರಿಗೆ ತೊಂದರೆ ಆಗಲಿದೆ. ಅರ್ಹರಲ್ಲದವರು ಮಳಿಗೆಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಲಾಟರಿ ವ್ಯವಸ್ಥೆ ಕೈ ಬಿಟ್ಟು, ಹಿರಿತನದ ಆಧಾರದ ಮೇಲೆ ಮಳಿಗೆ ಹಂಚಿಕೆ ಮಾಡಬೇಕು ಎನ್ನುವ ಮನವಿಯನ್ನು ಸಂಘ ಮಾಡಿದೆ.

ಅದ್ದೂರಿ ದಸರಕ್ಕಾಗಿ ಸರ್ಕಾರ ಸುಮಾರು 40 ಕೋಟಿ ರೂ. ವೆಚ್ಚ ಮಾಡುತ್ತಿದೆ. ಹಾಗಾಗಿ ಅತ್ಯಂತ ಹೆಚ್ಚು ಜನರ ಆಕರ್ಷಿಸುವ ಆಹಾರ ಮೇಳದಲ್ಲಿ ಭಾಗವಹಿಸುವ ಮಳಿಗೆಗಳ ದರ ಕಡಿಮೆ ಮಾಡಬೇಕು. ಆಹಾರ ಮೇಳಕ್ಕಾಗಿ ಒಂದು ಕೋಟಿ ರೂ. ತೆಗೆದಿರಿಸಿ ಜನರಿಗೆ, ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಲ್ಲಿ ಮನವಿ ಮಾಡುತ್ತೇವೆ.
ಕಂಸಾಳೆ ರವಿ, ಪ್ರಧಾನ ಕಾರ್ಯದರ್ಶಿ
ಮೈಸೂರು ದಸರಾ ಆಹಾರ ಮೇಳ ತಿಂಡಿ, ತಿನಿಸುಗಳ ಮಾರಾಟಗಾರರ ಸಂಘ