ತರೀಕೆರೆ: ಅನ್ಯ ಕೋಮಿನವರಿಗೆ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸುತ್ತಿರುವ
ಕ್ರಮವನ್ನು ಸರ್ಕಾರ ಕೈ ಬಿಡಬೇಕು ಎಂದು ಒತ್ತಾಯಿಸಿ ತಾಲೂಕು ವಾಲ್ಮೀಕಿ
ನಾಯಕರ ಸಂಘದ ಪ್ರಮುಖರು ಎಸಿ ಕಚೇರಿ ಶಿರಸ್ತೇದಾರ್ ನೀಲಾಂಬಿಕೆ ಮೂಲಕ
ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಎಚ್.ಆರ್.ಗೋವಿಂದಪ್ಪ ಮಾತನಾಡಿ, ಸರ್ಕಾರ ಭಾರತ
ಸಂವಿಧಾನದ ಪರಿಚ್ಛೇದ 341 ಮತ್ತು 342ರಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ,
ಔದ್ಯೋಗಿಕ ಹಾಗೂ ರಾಜಕೀಯ ಹಿಂದುಳಿದಿರುವ ಹಲವು ಸಮುದಾಯಗಳ
ಅಭಿವೃದ್ಧಿಗೆ 1950ನೇ ಸಾಲಿನ ನಂತರ ಮೀಸಲಾತಿ ನೀಡಿದೆ. ಆದರೆ ಈವರೆಗೂ ಎಸ್ಟಿ
ಸಮುದಾಯದವರ ಮೇಲಿನ ಶೋಷಣೆ, ದೌರ್ಜನ್ಯ ಮಾತ್ರ ಕಮ್ಮಿಯಾಗಿಲ್ಲ. ಎಸ್ಟಿ
ಸಮುದಾಯಕ್ಕೆ ನೀಡಿರುವ ಮೀಸಲಾತಿ ದುರ್ಬಳಕೆಯಾಗುತ್ತಿದೆ. ನಾಯಕ, ತಳವಾರ
ಹೆಸರಿನಲ್ಲಿ ಪ್ರವರ್ಗ-1ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪಪಂ ಜಾತಿ
ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ಪಡೆದು ವಂಚಿಸುತ್ತಿದ್ದಾರೆ ಎಂದು
ದೂರಿದರು.
ಸರ್ಕಾರ ಕೂಡಲೇ ಅನ್ಯ ಕೋಮಿನವರಿಗೆ ಪಪಂ ಪಟ್ಟಿಗೆ ಸೇರಿಸುವ ಪ್ರಯತ್ನ
ಕೈಬಿಟ್ಟು ಎಸ್ಟಿ ಸಮುದಾಯದ ಪ್ರಮಾಣ ಪತ್ರದ ದುರ್ಬಳಕೆ ಮಾಡಿಕೊಳ್ಳುತ್ತಿರುವವರ
ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಾಲ್ಮೀಕಿ ನಾಯಕ
ಸಂಘದ ಕಾರ್ಯದರ್ಶಿ ಆರ್.ಸಂತೋಷ್, ಪ್ರಮುಖರಾದ ರಮೇಶ್, ಮಂಜುನಾಥ್,
ಚಂದ್ರಶೇಖರ್, ಕಾಂತರಾಜು, ಕೃಷ್ಣಮೂರ್ತಿ, ಕೆ.ಕೆ.ಪ್ರಶಾಂತ್ ಇದ್ದರು.