ಕೆ.ಆರ್.ನಗರ: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಅನ್ಯ ಸಮುದಾಯವನ್ನು ಸೇರಿಸುತ್ತಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ಪಟ್ಟಣದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ನಾಯಕರ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಜಿ.ಎಸ್.ಸುರೇಂದ್ರಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್, ಪರಿಶಿಷ್ಟ ಪಂಗಡದ ನಾಯಕ ಸಮಾಜವನ್ನು ಸರ್ಕಾರ ವೋಟ್ ಬ್ಯಾಂಕ್‌ಗಾಗಿ ಬಳಿಸಿಕೊಂಡಿದೆ. ಅಧಿಕಾರಕ್ಕೆ ಬಂದ ನಂತರ ನಾಯಕ ಸಮಾಜದವರನ್ನೇ ದಮನ ಮಾಡಲು ಹೊರಟಿದೆ. ಸಚಿವರಾಗಿದ್ದ ಕೆ.ಎನ್.ರಾಜಣ್ಣ, ನಾಗೇಂದ್ರ ಅವರ ತಲೆದಂಡ ಮಾಡಿರುವ ರಾಜ್ಯ ಸರ್ಕಾರ ಜಾತಿ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ನಿಗಮದ 184 ಕೋಟಿ ರೂ. ಅವ್ಯವಹಾರ ವಿಚಾರದಲ್ಲಿ ಅನಗತ್ಯವಾಗಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಿತು. ಸರ್ಕಾರದಲ್ಲಿ ನಾಯಕ ಸಮುದಾಯದ ಸಚಿವರಿಗೆ ಮನ್ನಣೆ ಸಿಗುತ್ತಿಲ್ಲ. ಇದರ ವಿರುದ್ಧ ಸಮುದಾಯದ ಶಾಸಕರು ದನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ಇನ್ನೂ ಶೇ.7 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಇದುವರೆಗೂ ನೀಡಿಲ್ಲ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ ಎಂಬ ಸಬೂಬು ಹೇಳಿ ಜಾರಿಗೆ ತಂದಿಲ್ಲ. ಮುಂದೆ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠವನ್ನು ಇಡೀ ರಾಜ್ಯದಲ್ಲಿ ನಾಯಕ ಸಮುದಾಯ ಕಲಿಸಲಿದೆ ಎಂದರು.
ಈಗಲಾದರೂ ಪರಿಶಿಷ್ಟ ಪಂಗಡದ 13 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತೇವೆ. ಇಲ್ಲವಾದರೇ ನಮ್ಮ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು ಪಟ್ಟಣದ ವಾಲ್ಮೀಕಿ ನಾಯಕ ಸಮುದಾಯ ಭವನದಲ್ಲಿ ಸಭೆ ಸೇರಿದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ನಾಯಕರ ಸಂಘದ ಮುಖಂಡರು, ಯುವಕರು, ಮಹಿಳೆಯರು ಭಿತ್ತಿ ಪತ್ರ ಹಿಡಿದು ಮೈಸೂರು-ಹಾಸನ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಸಾಗಿದರು. ನಂತರ ಬಾಬಾ ಸಾಹೇಬ್ ಅಂಬೇಡ್ಕರ್, ನಾಲ್ವಡಿ, ಡಾ.ಬಾಬು ಜಗಜೀವನರಾಮ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಸ್ತೆ ಸಂಚಾರ ತಡೆದರು.
ಕೆ.ಆರ್.ನಗರ ತಾಲೂಕು ಅಧ್ಯಕ್ಷ ಸುಬ್ಬಕೃಷ್ಣ, ಪ್ರಧಾನ ಕಾರ್ಯದರ್ಶಿ ಸಾತಿಗ್ರಾಮ ಗಣೇಶ್, ಸುರೇಶ್, ವೆಂಕಟೇಶನಾಯಕ, ನಾಗರಾಜ್, ಭೈರನಾಯಕ, ದೇವರಾಜ್, ರಾಮನಾಯಕ, ಶಂಕರ್, ಬೆಟ್ಟನಾಯಕ, ಮಂಜುನಾಥ್, ಚಂದ್ರನಾಯಕ, ಕುಚೇಲ, ಚಿಕ್ಕರಾಮನಾಯಕ, ಚೆಲುವನಾಯಕ, ಕೃಷ್ಣನಾಯಕ, ಶಾಂತಕುಮಾರ್, ಸಂತೋಷ್, ದಿನೇಶ್, ಉದೇಶನಾಯಕ, ಪವನ್, ಶಂಕರ್, ಶಿವು, ಮಂಜುನಾಯಕ, ಈರಣ್ಣ, ಕೃಷ್ಣನಾಯಕ, ರಾಜನಾಯಕ, ಶಿವಣ್ಣ, ರಾಜನಾಯಕ, ರುದ್ರನಾಯಕ, ಕುಮಾರನಾಯಕ, ಕೃಷ್ಣ, ಕುಮಾರ್, ಲೋಕೇಶ್ ಇತರರು ಇದ್ದರು.