ಹಿರೇಕೆರೂರ: ರಾಜ್ಯದಲ್ಲಿ ವಿವಿಧ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದನ್ನು ವಿರೋಧಿಸಿ ತಾಲೂಕು ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಂ.ರೇಣುಕಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮಾಜದ ಅಧ್ಯಕ್ಷ ಜಿ.ಎಚ್. ತಳವಾರ ಮಾತನಾಡಿ, ನಮ್ಮ ಸಮಾಜವು ರಾಜ್ಯದಲ್ಲಿ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಸುದೀರ್ಘ ಹೋರಾಟದ ಫಲವಾಗಿ ಶೇ. 3ರಷ್ಟು ಇರುವ ಮೀಸಲಾತಿ ಶೇ. 7ಕ್ಕೆ ಏರಿಕೆಯಾಗಿದೆ. ನಮ್ಮ ಸಮಾಜದ ಅಭಿವೃದ್ಧಿ ಸಹಿಸದೇ ಬೇರೆ ಜಾತಿಯವರನ್ನು ಪರಿಶಿಷ್ಟ ಪಂಗಡ ಸೇರಲು ಪ್ರಯುತ್ನಿಸುತ್ತಿರುವುದು ಖಂಡನೀಯವಾಗಿದೆ. ಇತ್ತೀಚೆಗೆ ನಾಯಕ ತಳವಾರ, ನಾಯಕ ಪರಿವಾರವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಇದನ್ನು ದುರಪಯೋಗಪಡಿಸಿಕೊಂಡು ಇತರ ತಳವಾರ ಜಾತಿಯವರು ಹಾಗೂ ಪರಿವಾರದವರು ನಕಲಿ ಜಾತಿ ಪತ್ರ ಪಡೆಯುತ್ತಿದ್ದಾರೆ. ಇದರಿಂದ ನಿಜವಾದ ನಾಯಕ, ತಳವಾರರಿಗೆ ಅನ್ಯಾಯವಾಗುತ್ತಿದೆ. ಪರಿಶಿಷ್ಟ ಪಂಗಡಕ್ಕೆ ಇತರ ಜಾತಿ ಸೇರಿಸುವ ಕಾರ್ಯಕ್ಕೆ ಕೈಹಾಕಬಾರದು ಎಂದು ಆಗ್ರಹಿಸಿದರು.
ಪಪಂ ಸದಸ್ಯ ಬಸವರಾಜ ಕಟ್ಟಿಮನಿ, ಸಮಾಜದ ಮುಖಂಡರಾದ ಎನ್.ಎಂ. ಈಟೇರ, ಕೆ.ಡಿ. ದಿವಗೀಹಳ್ಳಿ, ಮಂಜುನಾಥ ಶಿವನಕ್ಕನವರ, ಹೊನ್ನಪ್ಪ ಸಾಲಿ ಹಾಗೂ ಸಮಾಜದವರು ಇದ್ದರು.