ಮುದ್ದೇಬಿಹಾಳ ಪಟ್ಟಣದ ತಾಲೂಕಾಡಳಿತ ಸೌಧಕ್ಕೆ ಆಗಮಿಸಿದ ಜೆಡಿಎಸ್ ಪದಾಧಿಕಾರಿಗಳು ಹಿಂದಿ ದಿವಸ್ ಆಚರಣೆಯನ್ನು ವಿರೋಸಿ ಬುಧವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಡಾ.ಸಿ.ಎಸ್.ಸೋಲಾಪೂರ, ಭೀಮನಗೌಡ ಕೊಡಗಾನೂರ, ಬಸವರಾಜ ಭಜಂತ್ರಿ ಇದ್ದರು. 
ಜಿಲ್ಲೆ

ಹಿಂದಿ ದಿವಸ್ ಆಚರಣೆಗೆ ವಿರೋಧ

Vijayapura

ಮುದ್ದೇಬಿಹಾಳ: ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆಗೆ ನಮ್ಮ ತೀವ್ರ ವಿರೋಧವಿದೆ. ಒಂದು ರಾಷ್ಟ್ರ, ಒಂದು ಭಾಷೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವರು ತಮ್ಮ ಸರ್ಕಾರದ ವೈಲ್ಯ ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರಗಳನ್ನು ಕೆದಕುತ್ತಿದ್ದಾರೆ ಎಂದು ಜೆಡಿಎಸ್ ಉಸ್ತುವಾರಿ ಡಾ.ಸಿ.ಎಸ್.ಸೋಲಾಪೂರ ಹೇಳಿದರು.

ಪಟ್ಟಣದಲ್ಲಿ ಹಿಂದಿ ದಿವಸ್ ಆಚರಣೆ ವಿರೋಧಿಸಿ ಜೆಡಿಎಸ್ ತಾಲೂಕು ಘಟಕ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಹಿಂದಿ ದಿವಸ್ ಆಚರಣೆಗೆ ಅವಕಾಶ ನೀಡಿದರೆ ಕನ್ನಡಿಗರಿಗೆ ಅನ್ಯಾಯವಾಗಲಿದೆ. ಯಾವುದೇ ಕಾರಣಕ್ಕೂ ಆಚರಣೆ ನಡೆಸಬಾರದು ಎಂದರು.

ಜೆಡಿಎಸ್ ಯುವ ಮುಖಂಡ ಭೀಮನಗೌಡ ಕೊಡಗಾನೂರ, ಬಸವರಾಜ ಭಜಂತ್ರಿ ಮಾತನಾಡಿ, ಒಡಿಶಾದಲ್ಲಿ ಒರಿಯಾ, ಗುಜರಾತ್‌ನಲ್ಲಿ ಗುಜರಾತಿ ಹೀಗೆ ಒಂದೊಂದು ರಾಜ್ಯದಲ್ಲೂ ಒಂದೊಂದು ಭಾಷೆಯಿದೆ. ಒಟ್ಟು 56 ಪ್ರಮುಖ ಭಾಷೆಗಳು ಮತ್ತು ಭಾಷಿಕರು ದೇಶದಲ್ಲಿ ನೆಲೆಸಿದ್ದಾರೆ. ಆಯಾ ರಾಜ್ಯ ಭಾಷೆಯ ಕತ್ತನ್ನು ಹಿಸುಕುವ ಕೆಲಸಕ್ಕೆ ನಮ್ಮ ವಿರೋಧವಿದೆ. ಜನತೆಯ ತೆರಿಗೆ ಹಣವನ್ನು ಖರ್ಚು ಮಾಡಿ ಹಿಂದಿ ದಿವಸ್ ಆಚರಿಸುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ಎಂದು ದೂರಿದರು.

ಪ್ರಾದೇಶಿಕ ಭಾಷೆಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಗೌರವಿಸಬೇಕು. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಬಲವಂತವಾದ ಹಿಂದಿ ದಿವಸ್ ಆಚರಣೆಗೆ ಅವಕಾಶ ನೀಡಬಾರದು ಎಂದರು. ಜೆಡಿಎಸ್ ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ, ಜಿಲ್ಲಾ ಮುಖಂಡ ಅರವಿಂದ ಕಾಶಿನಕುಂಟಿ, ಮುತ್ತು ಮಾದಿನಾಳ, ರಮೇಶ ಕಮತ, ಅಬ್ದುಲಮಜೀದ ಮಕಾನದಾರ, ಯಾಸೀನ ಬೇಪಾರಿ, ಅಬ್ದುಲ್‌ಸಲಾಂ ಮುಲ್ಲಾ, ಯಾಸೀನ ಅತ್ತಾರ, ಕೃಷ್ಣಾ ರಾಠೋಡ ಮತ್ತಿತರರು ಭಾಗಿಯಾಗಿದ್ದರು. ಶಿರಸ್ತೇದಾರ ವೀರೇಶ ತೊನಶ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು.