ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಎನ್.ಡಿ. ವಸ್ತ್ರದಕುಮಾರ, ಗೋಪಾಲ ಬಾಪೆಗೌಡ, ನಾಗಪ್ಪ ಹುಂಡಿ ಮತ್ತಿತರರಿದ್ದಾರೆ.  
ಜಿಲ್ಲೆ

ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ವಿರೋಧ, ಮೋದಿ-ಟ್ರಂಪ್ ಪ್ರತಿಕೃತಿ ದಹಿಸಿ ಹೋರಾಟ, ರಾಜ್ಯ ರೈತ ಸಂಘದಿಂದ ಅಭಿಯಾನ

ವಿಜಯಪುರ: ಕೇಂದ್ರ ಸರ್ಕಾರದ ಮುಕ್ತ ಮಾರುಕಟ್ಟೆ ಒಪ್ಪಂದ ವಿರೋಧಿಸಿ ಆ.13 ರಂದು ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕೃತಿ ದಹಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ರೈತ ವಿರೋಧಿ ಕಾನೂನು ಜಾರಿ ತಂದರು. ಹೋರಾಟದ ಮೂಲಕ ಹತ್ತಿಕ್ಕಲಾಯಿತಾದರೂ ರಾಜ್ಯ ಸರ್ಕಾರದ ಮೂಲಕ ಅವುಗಳ ಜಾರಿಗೆ ಮುಂದಾಗುತ್ತಿದೆ. ಹೀಗಾಗಿ ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇಶಾದ್ಯಂತ ಹೋರಾಟ ಹಮ್ಮಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮುಂದುವರಿದ ಭಾಗವಾಗಿ ನ.26 ರಂದು ರೈತರು ಹಾಗೂ ಕಾರ್ಮಿಕರು ದೇಶಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ. ಎಲ್ಲ ರಾಜ್ಯಗಳ ರಾಜ್ಯಧಾನಿಯಲ್ಲಿ ಟ್ರಾೃಕ್ಟರ್ ಮೆರವಣಿಗೆ ನಡೆಸಲಾಗುವುದು. ಬೇರೆ ಬೇರೆ ರಾಜ್ಯಗಳಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಹೋರಾಟ ನಡೆಯಲಿದೆ. ಎಲ್ಲ ಪಕ್ಷಗಳೂ ಕಾರ್ಪೋರೇಟ್ ಕಂಪನಿ ಪರವಾಗಿವೆ. ಹೀಗಾಗಿ ಜನರೇ ಈ ಕಂಪನಿಗಳ ವಿರುದ್ಧ ಹೋರಾಡಬೇಕಿದೆ. ಕಾರ್ಪೋರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಚಳುವಳಿಗೆ ಕರೆ ನೀಡಲಾಗುತ್ತಿದ್ದು, ಆ. 15 ರಿಂದ ಅಭಿಯಾನ ಆರಂಭಿಸಲಾಗುತ್ತಿದೆ ಎಂದರು.

ನ್ಯಾನೋ ತಂತ್ರಜ್ಞಾನದ ಅರಿವು ಮೂಡಿಸಿ

ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಕಳೆಗಟ್ಟಿವೆ. ಖುಷ್ಕಿ ಪ್ರದೇಶದಲ್ಲಿ ಹೆಚ್ಚಿನ ಬಿತ್ತನೆಯಾಗಿದೆ. ಆದರೆ ರೈತರಿಗೆ ರಸಗೊಬ್ಬರ ಸಮಸ್ಯೆ ಉಂಟಾಗಿದೆ. ರಸಗೊಬ್ಬರ ಸಿಕ್ಕರೂ ಎಂಆರ್‌ಪಿಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ರಸಗೊಬ್ಬರ ಮಾರಾಟ ದಂಧೆ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಈ ಹಿಂದೆ ಪರಿಚಯಿಸಿದ ನ್ಯಾನೊ ತಂತ್ರಜ್ಞಾನ ಒತ್ತಾಯಪೂರಕವಾಗಿ ಹೇರಲಾಗುತ್ತಿದೆ. ನ್ಯಾನೋ ಉತ್ಪಾದನೆಯಲ್ಲಿ ಹೆಚ್ಚಿನ ಲಾಭ ಇರುವ ಕಾರಣ ಅದನ್ನೇ ರೈತರ ಮೇಲೆ ಹೇರಲಾಗುತ್ತಿದ್ದು, ಇನ್ನುಳಿದ ರಸಗೊಬ್ಬರಗಳ ದರ ಹೆಚ್ಚಿಸಲಾಗುತ್ತಿದೆ ಎಂದರು.

ನ್ಯಾನೋ ತಂತ್ರಜ್ಞಾನದ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ನೀಡಬೇಕು. ಪ್ರಾತ್ಯಕ್ಷಿಕೆ ಮೂಲಕ ಮನವರಿಕೆ ಮಾಡಿಕೊಡಬೇಕು. ರಸಗೊಬ್ಬರ ಅಕ್ರಮ ದಂಧೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ವಿಚಕ್ಷಣಾ ದಳ ರಸಗೊಬ್ಬರ ಮಾರಾಟ ದಂಧೆಕೋರರ ಕೈಗೊಂಬೆಯಾಗಿದೆ. ಸರ್ಕಾರ ಒಂದು ಕಡೆ ಅಕ್ರಮ ಕೂಡ ತಡೆಯುತ್ತಿಲ್ಲ ಇನ್ನೊಂದೆಡೆ ನ್ಯಾನೋ ತಂತ್ರಜ್ಞಾನ ಕುರಿತು ಮಾಹಿತಿ ಕೂಡ ಕೊಡುತ್ತಿಲ್ಲ. ಇದರಿಂದ ಇಳುವರಿ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ರೈತರು ಬೆಂಬಲ ಬೆಲೆ ಕೇಳುತ್ತಾರೆ. ಆಗ ಸರ್ಕಾರ ಖರೀದಿ ಕೇಂದ್ರ ತೆಗೆದರೂ ಸಿಕ್ಕಾಪಟ್ಟೆ ಶೋಷಣೆಯಾಗುತ್ತಿದೆ. ಕೇವಲ ಶೇ.5 ರಷ್ಟು ರೈತರು ಮಾತ್ರ ಖರೀದಿ ಕೇಂದ್ರದ ಲಾಭ ಪಡೆದರೆ ಶೇ. 95 ರಷ್ಟು ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಹೀಗಾಗಿ ಬೆಂಬಲ ಬೆಲೆ ಘೋಷಿಸುವ ಮುನ್ನ ತಜ್ಞರೊಂದಿಗೆ ಚರ್ಚಿಸಿ ಖರೀದಿ ಕೇಂದ್ರ ತೆರೆದ ಸಂದರ್ಭ ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡದಂತೆ ಕಾನೂನು ಜಾರಿಗೊಳಿಸಬೇಕೆಂದರು.

ಮುಖಂಡರಾದ ಎನ್.ಡಿ. ವಸ್ತ್ರದಕುಮಾರ, ಗೋಪಾಲ ಬಾಪೆಗೌಡ, ನಾಗಪ್ಪ ಹುಂಡಿ, ಸಿದ್ದನಗೌಡ ಪಾಟೀಲ, ಮೋತಿರಾಮ ಚವಾಣ್, ಅಪ್ಪಾಸಾಹೇಬ ಯರನಾಳ ಮತ್ತಿತರರಿದ್ದರು.