ಜಿಲ್ಲೆ

ಸಿದ್ಧಾರ್ಥ ಕಾಲೇಜಿನ ಮೇಲೆ ಇಡಿ ದಾಳಿಗೆ ವಿರೋಧ

ರೇಷ್ಮೆ ನಗರ ಡೆಸ್ಕ್

ಮಾಗಡಿ: ಸಿದ್ಧಾರ್ಥ ಕಾಲೇಜಿನ ಮೇಲೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿರುವುದನ್ನು ರಾಜ್ಯ ಎಸ್‌ಸಿ ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ, ಸಂಬುದ್ಧ ಜನಸೇವಾ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಶಿವಶಂಕರ್ ಖಂಡಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಅಂಗೀಕರಿಸಿ 75 ವರ್ಷಗಳಾದರೂ ದಲಿತ ಸಮುಯದಾಯದ ನಾಯಕರು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಲು ಸಾಧ್ಯವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಸಿದ್ಧಾರ್ಥ ಕಾಲೇಜಿನ ಮೇಲೆ ಇಡಿ ದಾಳಿ ನಡೆಸಿರುವುದು ಅನುಮಾನಕ್ಕೆ ಎಡೆಮಾಡಿದೆ. ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಪದವಿ ತಪ್ಪಿಸಲು ಕುತಂತ್ರ ಮಾಡಲಾಗುತ್ತಿದೆ ಎಂದರು.

ಟ್ರಸ್ಟ್ ಸದಸ್ಯ ಬೆಳ್ಳಿಯಪ್ಪ ಮಾತನಾಡಿ, ದಲಿತ ಸಮುದಾಯದ ಬೆವರಿನಿಂದ ಸ್ಥಾಪಿಸಿದ ಸಂಸ್ಥೆಗೆ ಕೆಟ್ಟ ಹೆಸರು ತರಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಟ್ರಸ್ಟ್ ಕಾನೂನು ಸಲಹೆಗಾರ ಚಿಕ್ಕರಾಜು ಮಾತನಾಡಿ, 2014ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿದ್ದ ಪರಮೇಶ್ವರ ಅವರು ಮುಖ್ಯಮಂತ್ರಿ ಗಾದಿಗೇರುವುದನ್ನು ತಪ್ಪಿಸಲು ಹುನ್ನಾರ ನಡೆಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಟ್ರಸ್ಟ್‌ನ ನಿರ್ದೇಶಕ ನರಸಿಂಹ ಮೂರ್ತಿ, ತೂಬಿನಕೆರೆ ನಾಗರಾಜ್, ಚಿಕ್ಕಮುದಿಗೆರೆ ಸುರೇಶ್, ಸುಗ್ಗನಹಳ್ಳಿ ಕೃಷ್ಣಮೂರ್ತಿ, ಬೀಚನಹಳ್ಳಿ ಸುರೇಶ್ ಇತರರು ಇದ್ದರು.