ಜಿಲ್ಲೆ

ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ಅಜ್ಜಂಪುರ ಪಪಂ ತಾಲೂಕಿನ ಚನ್ನಾಪುರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಉದ್ದೇಶಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಬಗ್ಗವಳ್ಳಿ, ಚನ್ನಾಪುರ ಗ್ರಾಮಸ್ಥರು ಮಾತ್ರವಲ್ಲ, ವಿವಿಧ ಸಂಘ, ಸಂಸ್ಥೆ ಪದಾಧಿಕಾರಿಗಳು ಅಜ್ಜಂಪುರ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಿಂದ ತಾಲೂಕು ಕಚೇರಿಗೆ ಮೆರವಣಿಗೆ ಮೂಲಕ ಸಾಗಿ ತಹಸೀಲ್ದಾರ್ ವಿನಾಯಕ್ ಸಾಗರ್‌ಗೆ ಮನವಿ ಸಲ್ಲಿಸಿದರು.

ಗೋಮಾಳ ಸಂರಕ್ಷಣಾ ಸಮಿತಿ ಪ್ರಮುಖ ಸಿ.ಎಸ್.ಸಿದ್ದೇಗೌಡ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಅಜ್ಜಂಪುರ ಪಟ್ಟಣ ಪಂಚಾಯಿತಿ ಚನ್ನಾಪುರ ಗ್ರಾಮದ ಸರ್ವೇ ನಂ. 82ರಲ್ಲಿ ಜಾಗ ಗುರುತಿಸಿದೆ. ಈ ಜಾಗ ಗೋಮಾಳಕ್ಕೆ ಸೇರಿದ್ದು, ದನಕರುಗಳ ಮೇವಿಗೆ ಅನುಕೂಲವಾಗಿದೆ. ಇಲ್ಲಿ ಘಟಕ ಸ್ಥಾಪನೆಯಾದರೆ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಎಲ್ಲ ಸಾಧಕ-ಭಾದಕಗಳನ್ನು ತಾಲೂಕು ಆಡಳಿತ ಪರಿಶೀಲಿಸಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ನಿರ್ಧಾರ ಕೈಬಿಡಬೇಕು. ತೀವ್ರ ವಿರೋಧದ ನಡುವೆಯೂ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯ ತೀರ್ಮಾನಕೈಗೊಂಡರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಶೈಲಾ, ಸದಸ್ಯರಾದ ರೂಪ, ಹೊನ್ನಮ್ಮ, ಪವಿತ್ರ, ಪ್ರಮುಖರಾದ ಸಿ.ಬಿ.ಮಲ್ಲಪ್ಪ, ಕುಮಾರಪ್ಪ, ಜಯದೇವಯ್ಯ, ಮಲ್ಲಿಕಾರ್ಜುನ್, ಎನ್.ಸಿ.ನಾಗಭೂಷಣ್, ಬಸವರಾಜ್, ರಘು ಮತ್ತಿತರರಿದ್ದರು.