ಅರಕಲಗೂಡು: ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಳಸಿಕೊಳ್ಳುವ ಮೂಲಕ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿವೆ ಎಂದು ಮಾಜಿ ಸಚಿವ ಎ.ಮಂಜು ಕಿಡಿಕಾರಿದರು.
ಪಟ್ಟಣದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ- 2019 ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರ ಕಾಲದಲ್ಲೇ ಪೌರತ್ವ ವಿಧೇಯಕ ಕಾನೂನನ್ನು ರೂಪಿಸಲಾಗಿತ್ತು. ಭಾರತವನ್ನು ಇಷ್ಟು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಕಾಯ್ದೆಯನ್ನು ಜಾರಿ ಮಾಡುವಲ್ಲಿ ವಿಫಲವಾಗಿತ್ತು. ಕಳೆದ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿನ ಘೋಷಣೆಯಂತೆ ಬಿಜೆಪಿ ಇದೀಗ ಕಾಯ್ದೆಯನ್ನು ಜಾರಿಗೊಳಿಸಿದೆ ಎಂದರು.
ಮಸೂದೆ ಬಗ್ಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಅರಿವಿದೆ. ಆದರೆ ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳಲು ಧರ್ಮದ ಬಣ್ಣ ಹಚ್ಚುತ್ತಿರುವುದು ತರವಲ್ಲ. ನೆರೆಯ ಬಾಂಗ್ಲಾ, ಪಾಕಿಸ್ತಾನ, ಅಪ್ಘಾನಿಸ್ತಾನದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದು, ಅಲ್ಲಿ ಇಸ್ಲಾಂ ರಾಷ್ಟ್ರೀಯ ಧರ್ಮವಾಗಿದೆ. ಅಲ್ಲಿಂದ ಭಾರತಕ್ಕೆ ನಿರಾಶ್ರಿತರಾಗಿ ಬರುವ ಹಿಂದುಗಳು, ಸಿಕ್ಕರು, ಬೌದ್ಧರು, ಜೈನ ಧರ್ಮದವರಿಗೆ ಪೌರತ್ವ ಕಲ್ಪಿಸಿ ಮೂಲ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಜಾರಿಗೊಳಿಸಿರುವ ಕಾಯ್ದೆ ಇದಾಗಿದೆ ಎಂದು ಹೇಳಿದರು.
ಯಾರೊಬ್ಬರಿಗೂ ಅನ್ಯಾಯವಾಗದ ಈ ಕಾಯ್ದೆಯನ್ನು ದೇಶದಲ್ಲಿ ಎಲ್ಲರೂ ಪಕ್ಷಾತೀತವಾಗಿ ಗೌರವಿಸಬೇಕಾಗಿತ್ತು. ದುರದೃಷ್ಟವಶಾತ್ ಮತಬ್ಯಾಂಕ್‌ಗಾಗಿ ಒಡೆದು ಆಳುವ ನೀತಿಗೆ ಅಂಟಿಕೊಂಡಿರುವ ವಿರೋಧ ಪಕ್ಷಗಳು, ಮುಸ್ಲಿಮರನ್ನು ದೇಶದಿಂದ ಹೊರ ಹಾಕಲು ಇದನ್ನು ಜಾರಿಗೆ ತರಲಾಗಿದೆ ಎಂದು ಬಿಂಬಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ಹೊರ ರಾಷ್ಟ್ರಗಳಲ್ಲಿ ಆಯಾ ದೇಶಗಳಿಗೆ ಅನುಗುಣವಾಗಿ ಪೌರತ್ವ ವಿಧೇಯಕ ಜಾರಿಗೊಳಿಸಲಾಗಿದೆ. ಭಾರತಕ್ಕೆ ಅನುಗುಣವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ. ಈ ನೆಲದ ಕಾನೂನು ಗೌರವಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಬೇಕು ಎಂದರು.
ಕಾಯ್ದೆ ಮಹತ್ವವನ್ನು ಪ್ರತಿ ಮನೆಗಳಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಪಕ್ಷದ ಪ್ರಮುಖರಾದ ವಿಜಯ್ ವಿಕ್ರಮ್, ನಟೇಶ್‌ಕುಮಾರ್ ಪೌರತ್ವ ತಿದ್ದುಪಡಿ ಕಾಯ್ದೆ ಮಹತ್ವ ಕುರಿತು ವಿವರಿಸಿದರು. ಮುಖಂಡರಾದ ವಿಶ್ವನಾಥ್, ಪಿ.ಟಿ. ಕೇಶವೇಗೌಡ, ಪುಟ್ಟೇಗೌಡ, ಸಾಂಬಶಿವಪ್ಪ, ಶಾಂತರಾಜ್ ಮುಂತಾದವರು ಉಪಸ್ಥಿತರಿದ್ದರು.