ಬಳ್ಳಾರಿ: ರೈಲ್ವೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಸಿಐಟಿಯು ಕಾರ್ಯಕರ್ತರು ಶುಕ್ರವಾರ ಬಳ್ಳಾರಿಯ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಜೆ. ಸತ್ಯಬಾಬು ಮಾತನಾಡಿ, ಒಳ್ಳೆಯ ದಿನಗಳು ಬರಲಿದೆ ಎಂದು ದೇಶದ ಜನತೆಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆಯೇರಿ ಕಳೆದ 9 ವರ್ಷಗಳಿಂದ ಜನಸಾಮಾನ್ಯರ ಬದುಕನ್ನು ಸರ್ವನಾರಗೊಳಿಸಿದ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನಿತ್ಯನಿರಂತರವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಹಾಗೂ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತರ ಬದುಕಿಗೆ ಮಾರಕವಾಗುವ ಕಾನೂನುಗಳನ್ನು ಜಾರಿಗೊಳಿಸಲು ಸತತ ಪ್ರಯತ್ನ ನಡೆಸುವ ಕೇಂದ್ರ ಸರ್ಕಾರ ದೇಶದ ಕೃಷಿ ವ್ಯವಸ್ಥೆಯನ್ನು ಬುಡಮೇಲುಗೊಳಿಸುತ್ತಿದೆ. ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗದ 20 ಪ್ರಮುಖ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ರೂಪಿಸಿ ಮತ್ತೆ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಪಿತೂರಿ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ಉದ್ದಿಮೆಗಳನ್ನು ರಾಷ್ಟ್ರೀಯ ನಗದೀಕರಣ ಹೆಸರಿನಲ್ಲಿ ದೈತ್ಯ ಕಾರ್ಪೊರೇಟ್ ಕಂಪೆನಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ವಿಮಾನ ನಿಲ್ದಾಣ, ಹೆದ್ದಾರಿಗಳು, ಬಂದರುಗಳು, ರೈಲ್ವೆ, ವಿದ್ಯುತ್, ಶಿಕ್ಷಣ, ವಿಮೆ, ಬ್ಯಾಂಕ್‌ಗಳು ಹಾಗೂ ರಕ್ಷಣ ವಲಯಗಳನ್ನು ಖಾಸಗೀಕರಣದ ಕಬಂಧ ಬಾಹುಗಳಲ್ಲಿ ಬಂಧಿಸಲಾಗಿದೆ. ಕಳೆದ 9 ವರ್ಷಗಳಲ್ಲಿ ಸಾರ್ವಜನಿಕ ಒಡೆತನದ ಬ್ಯಾಂಕ್‌ಗಳಿಂದ ಕಾರ್ಪೊರೇಟ್ ಕುಳಗಳು ಪಡೆದ 14.56 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿರುವ ಕೇಂದ್ರ ಸರ್ಕಾರವು ಅನ್ನದಾತ ರೈತರ ಸಾಲವನ್ನು ಮನ್ನಾ ಮಾಡಲು ತಯಾರಿಲ್ಲ. ಪ್ರಸ್ತುತ ದೇಶದ ಸಾಲ 153 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ನಡೆ ದೇಶದ ಅರ್ಥ ವ್ಯವಸ್ಥೆಯನ್ನು ನಾಶಗೊಳಿಸಿದೆ ಎಂದು ದೂರಿದರು.
ಜನರ ಜೀವನಾಡಿಯಾದ ರೈಲ್ವೆ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಅಸ್ತು ನೀಡಿದೆ. ಭಾರತೀಯ ರೈಲ್ವೆ ನಮ್ಮ ಆರ್ಥಿಕತೆಯ ಜೀವಾಳ, ಭಾರತೀಯ ರೈಲು ದೇಶದಾದ್ಯಂತ ಇರುವ 7,300 ರೈಲ್ವೆ ನಿಲ್ದಾಣಗಳ ಮೂಲಕ 13,452 ಪ್ರಯಾಣಿಕ ರೈಲುಗಳು ಸಂಚರಿಸುತ್ತಿವೆ. ಈ ರೈಲುಗಳ ಮೂಲಕ 2.40 ಕೋಟಿ ಪ್ರಯಾಣಿಕರು ಪ್ರತಿದಿನ ಸಂಚರಿಸುತ್ತಾರೆ. ಆಹಾರ ಧಾನ್ಯಗಳು, ಸಾಮಾನ್ಯ ಜನರು ಬಳಕೆ ಮಾಡುವ ಅಗತ್ಯ ವಸ್ತುಗಳು, ಕೃಷಿ ಮತ್ತು ಕೈಗಾರಿಕೆ ಉತ್ಪನ್ನಗಳು ಸೇರಿದಂತೆ 1.42 ಶತಕೋಟಿ ಮೆಟ್ರಿಕ್ ಟನ್ ಸರಕುಗಳನ್ನು ಪ್ರತಿದಿನ ಸಾಗಣೆ ಮಾಡಲಾಗುತ್ತಿದೆ. ದೇಶದ ಅರ್ಥವ್ಯವಸ್ಥೆಗೆ ಬಾರಿ ಕೊಡುಗೆ ನೀಡಿದ ರೈಲ್ವೆ ವಲಯವನ್ನು ಖಾಸಗೀಕರಣಗೊಳಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಆರೋಪಿಸಿದರು.
ಕೋಮುವಾದಿ ಬಿಜೆಪಿ ನೇತೃತ್ವದ ಕೂಟ ದೇಶವನ್ನು ಆಳುತ್ತಿದ್ದು, ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ನವ ಉದಾರೀಕರಣ ನೀತಿಗಳನ್ನು ಅತ್ಯಂತ ವೇಗದಲ್ಲಿ ಜಾರಿಗೊಳಿಸುತ್ತಿದ್ದು, ಇದಕ್ಕೆ ಪೂರಕವಾಗಿ ವಿಭಜನಕಾರಿ- ಕೋಮುವಾದಿ ಧೋರಣೆಗಳನ್ನು ಆಳವಾಗಿ ಕೊಂಡೊಯ್ಯುವ ಮೂಲಕ ಕೋಮುವಿಭಜನೆಯ ಧ್ರುವೀಕರಣ ಮಾಡಲಾಗುತ್ತ್ತಿದೆ. ದುಡಿಯುವ ವರ್ಗವನ್ನು ಹಾಗೂ ಜನತೆಯನ್ನು ಕೋಮು ಆಧಾರದಲ್ಲಿ ವಿಂಗಡಿಸಿ ನೈಜ ಸಮಸ್ಯೆಗಳಿಂದ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸಿ ತಮ್ಮ ರಾಜಕೀಯ ಲಾಭ ಪಡೆಯಲು ಸ್ವತಃ ಕೇಂದ್ರ ಸರ್ಕಾರವೇ ಪ್ರಚೋದಿಸುತ್ತಿದೆ. ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ‘ಜನತೆಯನ್ನು ರಕ್ಷಿಸಿ-ದೇಶವನ್ನು ಉಳಿಸಿ’ ಎಂಬ ಘೋಷಣೆಯೊಂದಿಗೆ ರೈತ-ಕಾರ್ಮಿಕರ ಸಖ್ಯತೆಯಲ್ಲಿ ವಿಶಾಲ ಜನಾಂದೋಲನವನ್ನು ರೂಪಿಸಬೇಕಿದೆ ಎಂದು ತಿಳಿಸಿದರು. ಮುಖಂಡರಾದ ಆರ್.ಎಸ್.ಬಸವರಾಜ, ಜೆ.ಎಂ.ಚನ್ನಬಸಯ್ಯ, ವಿ.ಎಸ್.ಶಿವಶಂಕರ್ ಮತ್ತಿತರರಿದ್ದರು.