ಮದ್ದೂರು; ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಯ ಮಾಡಿ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಲು ತೀರ್ಮಾನಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗೆಜ್ಜಲಗೆರೆ ಗ್ರಾಮಸ್ಥರು ತೀವ್ರವಾಗಿ ಖಂಡಿಸುತ್ತೇವೆ ಎಂದು ರೈತ ನಾಯಕಿ ಸುನಂದಾ ಜಯರಾಂ ತಿಳಿಸಿದ್ದಾರೆ.
ಗೆಜ್ಜಲಗೆರೆ ಗ್ರಾಮವು ಐತಿಹಾಸಿಕ ಗ್ರಾಮವಾಗಿದ್ದು, ರಾಷ್ಟ್ರ ಮಟ್ಟದಲ್ಲಿ ರೈತ ಹೋರಾಟ, ಚಳವಳಿಗಳಿಗೆ ಹೆಸರಾಗಿದ್ದು, ಗ್ರಾಮವು ಸ್ವಾಭಿಮಾನದ ಗ್ರಾಮವಾಗಿದೆ. ನಿರಂತರವಾಗಿ ಗ್ರಾಮ ಭಾರತದ ಸ್ವತ್ತು ಎಂದು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಇಂತಹ ಗ್ರಾಮವನ್ನು ನಗರಸಭೆಗೆ ಸೇರ್ಪಡೆ ಮಾಡುತ್ತಿರುವ ನಿರ್ಣಯ ಅವಿವೇಕತನದಿಂದ ಕೂಡಿದೆ. ಗೆಜ್ಜಲಗೆರೆ ಗ್ರಾಮದ ಹಿನ್ನೆಲೆಯನ್ನು ಪರಿಗಣಿಸದೆ ಗ್ರಾಮದ ವರ್ಚಸ್ಸಿಗೆ ಮಸಿ ಬಳಿದು, ನಗರಸಭೆಯ ಒಂದು ಬಡಾವಣೆಯಾಗಿ ಮಾಡುತ್ತಿರುವುದನ್ನು ಪತ್ರಿಕಾ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.
ಗೆಜ್ಜಲಗೆರೆ ಗ್ರಾಮಸ್ಥರು ಈಗಾಗಲೇ ಗ್ರಾಮ ಪಂಚಾಯಿತಿಯ ವಾಸ ಸ್ಥಳಗಳು, ಗ್ರಾಮದ ಸರ್ವೇ ಪ್ರದೇಶಗಳನ್ನು ಮದ್ದೂರು ನಗರ ಸಭೆಗೆ ಸೇರ್ಪಡೆ ಮಾಡುವುದನ್ನು ವಿರೋಧಿಸಿದ್ದಾರೆ. ಈ ಸಂಬಂಧ ಗ್ರಾಮಪಂಚಾಯಿತಿಗೆ ಪತ್ರವನ್ನು ನೀಡಲಾಗಿದೆ. ಆದರೆ, ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರಿಸಲು ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದು ಕೊಂಡಿರುವುದನ್ನು ತಕ್ಷಣವೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಗೆಜ್ಜಲಗೆರೆ ಗ್ರಾಮ ಹಾಗೂ ತಾಲೂಕಿನ ಇನ್ನಿತರ ಗ್ರಾಮಗಳನ್ನು ಮದ್ದೂರು ನಗರಸಭೆಗೆ ಸೇರ್ಪಡಿಸುವ ಸಚಿವ ಸಂಪುಟದ ನಿರ್ಣಯವನ್ನು ತಕ್ಷಣ ರದ್ದುಗೊಳಿಸುವಂತೆ ಒತ್ತಾಯಿಸುತ್ತೇವೆ. ಸರ್ಕಾರಗಳು ಗ್ರಾಮ ಭಾರತವನ್ನು ನಗರಗಳ ಭಾರತಕ್ಕೆ ಸೇರ್ಪಡೆ ಮಾಡಿ ಕೃಷಿ ಪ್ರದೇಶಗಳಿಗೆ, ಕೃಷಿ ಬದುಕಿಗೆ, ಆಹಾರ ಭದ್ರತೆಗೆ, ಸಾಮಾಜಿಕ ಬದುಕಿಗೆ ಕೊಡಲಿಪೆಟ್ಟು ಹಾಕುವ ದುರಂತಕ್ಕೆ ಮುಂದಾಗದಿರಲಿ ಎಂದು ಸುನಂದಾ ಜಯರಾಂ ಒತ್ತಾಯಿಸಿದ್ದಾರೆ.