ಹುಬ್ಬಳ್ಳಿ: ರಾಜ್ಯದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಇಂಥವುಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು. ಆದರೆ, ಪ್ರತಿಪಕ್ಷದವರು ಸಾರ್ವಜನಿಕರಿಗೆ ಅಗತ್ಯವಿಲ್ಲದ ಹನಿಟ್ರಾೃಪ್ ಬಗ್ಗೆ ಹೋರಾಟ ಮಾಡುತ್ತಿರುವುದು ದುರದೃಷ್ಟಕರ. ಪ್ರಚಾರ ಗಿಟ್ಟಿಸಿಕೊಳ್ಳಲು ಬಿಜೆಪಿ ಈ ರೀತಿ ತಂತ್ರ ರೂಪಿಸಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಬಗ್ಗೆ ಹೋರಾಟ ಹಾಗೂ ಸ್ಪೀಕರ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಅಮಾನತು ಆಗಿದ್ದಾರೆ. ಈಗಾಗಲೇ ಈ ಬಗ್ಗೆ ಉನ್ನತ ತಂಡ ರಚಿಸಿ ತನಿಖೆ ನಡೆಸುವುದಾಗಿ ಸರ್ಕಾರ ಸ್ಪಷ್ಟ ಪಡಿಸಿದೆ ಎಂದರು.
ಬಹುಶಃ ಬಜೆಟ್ ಮಂಡನೆ ಮೇಲಿನ ಚರ್ಚೆ ಬಳಿಕ ಮುಖ್ಯಮಂತ್ರಿ ಅವರ ಪ್ರತಿಕ್ರಿಯೆ ನೀಡುವುದು ವಿರೋಧ ಪಕ್ಷದವರಿಗೆ ಇಷ್ಟವಿರಲಿಲ್ಲ ಅನಿಸುತ್ತದೆ. ಸ್ಪೀಕರ್‌ಗೆ ಅಪಮಾನ ಮಾಡುವುದು ಸರಿನಾ? ಎಂದು ಪ್ರಶ್ನಿಸಿದರು.
ಹನಿಟ್ರ್ಯಾಪ್ ವಿಚಾರಗಳು ಇಡೀ ವ್ಯವಸ್ಥೆಗೆ ನಾಚಿಕೆಯಾಗುವಂಥದ್ದಾಗಿದೆ. ಬೇರೆ ದೇಶದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಗುತ್ತಿದ್ದು, ಆದರೆ ಇಲ್ಲಿ ಇಂತಹ ವಿಚಾರದ ಬಗ್ಗೆ ಚರ್ಚೆಯಾಗುತ್ತಿರುವುದು ವಿಷಾದನೀಯ. ಶಾಸಕರು ತಮ್ಮ ಮಿತಿಯನ್ನು ಮೀರಬಾರದಿತ್ತು ಎಂದರು.
ಲೋಕಸಭಾ ಚುನಾವಣೆ ಕ್ಷೇತ್ರ ಮರುವಿಗಂಡಣೆ ವಿಚಾರ ಬಗ್ಗೆ ಚರ್ಚೆ ನಡೆಯುತ್ತಿದೆ. ದಕ್ಷಿಣ ಭಾರತದವರು ಜನಸಂಖ್ಯೆ ನಿಯಂತ್ರಣದಲ್ಲಿದೆ. ಯಾವ ಮಾನದಂಡದಿಂದ ಮರುವಿಗಂಡಣೆ ಮಾಡಲಾಗುತ್ತಿದೆ ಎಂಬುದು ಎಲ್ಲರಲ್ಲಿಯೂ ಆತಂಕವಿದೆ. ಎಲ್ಲ ರಾಜಕೀಯ ಪಕ್ಷಗಳು ಸೇರಿ ಈ ಬಗ್ಗೆ ಹೆಚ್ಚಿನ ಚರ್ಚೆ ಮಾಡಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯೀಕರಣ ಆದ ಮೇಲೆ ಭ್ರಷ್ಟಾಚಾರ, ಕಪ್ಪು ಹಣಕ್ಕೆ ಕಡಿವಾಣವಾಗಲಿದೆ ಎಂದು ತಿಳಿಸಿದ್ದರು. ಇತ್ತೀಚೆಗೆ ನ್ಯಾಯಾಧೀಶರ ಮನೆಯಲ್ಲಿ ಹಣ ಸಿಕ್ಕಿದೆ. ರಾಜಕಾರಣಿಗಳ ಮನೆಯಲ್ಲೂ ಸಿಗುತ್ತಿದೆ. ಸದ್ಯ ಎಲ್ಲ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಚರ್ಚೆ ಆಗಬೇಕು. ಮುಂದಿನ ದಿನಗಳಲ್ಲಿ ಹೊಸದಾಗಿ ಹಾಗೂ ವಿನೂತನ ರಾಜಕಾರಣ ಬರಬೇಕು ಎಂದು ಮನವಿ ಮಾಡಿದರು.