ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಾಸಿಕ್ಯೂಷನ್ಗೆ ಸಂಬಂಧಿಸಿ ಮೂಲವಾದ ತನಿಖೆಯೇ ಆಗಿಲ್ಲ. ತನಿಖೆ ಮಾಡಲು ಅಡ್ಡಿ ಇಲ್ಲ ಎಂದು ನ್ಯಾಯಾಲಯ ಹೇಳಿರಬಹುದು. ತನಿಖೆ ಆಗದೆ ಪ್ರಾಸಿಕ್ಯೂಷನ್ ಪ್ರಶ್ನೆ ಎಲ್ಲಿಂದ ಬಂತು? ನಾವೆಲ್ಲ ಸಿಎಂ ಜತೆ ಇದ್ದೇವೆ. ಇದೊಂದು ಷಡ್ಯಂತ್ರ. ಬಿಜೆಪಿ- ಜೆಡಿಎಸ್ನ ರಾಜಕೀಯ ಕುತಂತ್ರದ ಒಂದು ಭಾಗ ಎಂದು ಸಚಿವ ಡಾ. ಎಂ.ಸಿ. ಸುಧಾಕರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಹೋರಾಟಕ್ಕೆ ಸಾಕಷ್ಟು ಅವಕಾಶಗಳಿವೆ. ಇದನ್ನು ನಾವು ಕಾನೂನು ರೀತಿ ನೋಡಿಕೊಳ್ಳುತ್ತೇವೆ. ಸಿದ್ದರಾಮಯ್ಯನವರು ತಪ್ಪು ಮಾಡಿದ್ದಾರೆ ಎನ್ನಲು ಸಾಧ್ಯವಿಲ್ಲ. ಮೊದಲು ತನಿಖೆಯಾಗಲಿ, ತನಿಖೆಯಲ್ಲಿ ತಪ್ಪು ಮಾಡಿದಾಗ ಮಾತ್ರ ಅವರು ಆರೋಪಿಯಾಗುತ್ತಾರೆ. ಇದರ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳುವೆ. ಸರ್ಕಾರಕ್ಕೆ ಮುಜುಗರ ತರಲು ವಿರೋಧ ಪದವರು ಈ ರೀತಿ ಮಾಡಿದ್ದಾರೆ ಎಂದರು.
ನಮ್ಮ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ಬೀಳಿಸುತ್ತೇವೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡ ಮೇಲೆ ಸರ್ಕಾರ ಬೀಳಿಸುವುದು ಜೋರಾಗಿದೆ. ಕೇಂದ್ರದಲ್ಲಿ ಅವರು ಮಂತ್ರಿಯಾದರೂ ರಾಜ್ಯದಲ್ಲಿ ಅಧಿಕಾರ ಚಲಾಯಿಸುವ ಕನಸು ಕಾಣುತ್ತಿದ್ದಾರೆ. ಆ ಕನಸು ನನಸಾಗುವುದಿಲ್ಲ. ಇಡೀ ದೇಶದಲ್ಲಿ ಕುತಂತ್ರದ ರಾಜಕಾರಣ ನಡೆಯುತ್ತಿದೆ. ಇದರಿಂದ ನಾವು ಧೃತಿಗೆಡುವುದಿಲ್ಲ ಎಂದರು.
ಸಮಿತಿ ಶಿಫಾರಸ್ಸಿನಂತೆ ಕುಲಪತಿ ನೇಮಕ: ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ನಿವೃತ್ತಿ ಬಳಿಕ ಸಮಿತಿಯ ಶಿಫಾರಸ್ಸಿನ ಮೇಲೆ ನೂತನ ಕುಲಪತಿ ಆಯ್ಕೆ ಬಗ್ಗೆ ಚಿಂತನೆ ನಡೆಸಲಾಗುವುದು. ವಿವಿಗೆ ಸೂಕ್ತ ಅನುದಾನ ನೀಡುವ ಮೂಲಕ ನೂತನ ಕುಲಪತಿ ನೇಮಕದ ನಿರ್ಧಾರವನ್ನು ಮಾಡಲಾಗುವುದು. ಅದಕ್ಕಾಗಿ ಅಧಿಸೂಚನೆ ಹೊರಡಿಸಿ, ಸಮಿತಿ ರಚಿಸಿ, ಯಾವುದೇ ಜಾತಿ, ಧರ್ಮ ಎನ್ನದೇ ಅರ್ಹ ವ್ಯಕ್ತಿಯನ್ನು ಕುಲಪತಿಯನ್ನಾಗಿ ಮಾಡಲಾಗವುದು ಎಂದರು.