ಅಭಯ ಪಾಟೀಲ ನೇತೃತ್ವದಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣಗೊಂಡಿತು. ಸವಿತಾ ಕಾಂಬಳೆ, ಶಿವೇಂದ್ರರಾಜೆ ಬೋಸ್ಲೆ ಇತರರಿದ್ದರು. 
ಜಿಲ್ಲೆ

ವಿರೋಧ ಮಧ್ಯೆ ಪುತ್ಥಳಿ ಅನಾವರಣ

ಶಂಕರ ಗೆಜ್ಜಿ

ಬೆಳಗಾವಿ: ಅನಗೋಳದ ಛತ್ರಿಪತಿ ಸಂಭಾಜಿ ಮಹಾರಾಜ ವೃತ್ತದ ಸಂಭಾಜಿ ಮಹಾರಾಜರ ಪುತ್ಥಳಿ ಲೋಕಾರ್ಪಣೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರೂ ಶಾಸಕ ಅಭಯ್ ಪಾಟೀಲ ಬಣದವರು ಜಿಲ್ಲಾಡಳಿತಕ್ಕೆ ಸಡ್ಡು ಹೊಡೆದು ಭಾನುವಾರ ಶಿವಾಜಿ ಮಹಾರಾಜರ 13ನೇ ವಂಶಸ್ಥರ ಶಿವೇಂದ್ರರಾಜೆ ಬೋಸ್ಲೆ ಅವರಿಂದ ಪುತ್ಥಳಿ ಅನಾವರಣಗೊಳಿಸಿದರು.

ಪುತ್ಥಳಿ ಅನಾವರಣ ಮಾಡದಂತೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಧಾನ ಸಭೆ ಮಾಡಿ, ಸ್ಥಳಕ್ಕೂ ಭೇಟಿ ನೀಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಇದೆಲ್ಲದರ ಮಧ್ಯೆಯೂ ಭಾನುವಾರ ಶಾಸಕ ಅಭಯ ಪಾಟೀಲ, ಮೇಯರ್ ನೇತೃತ್ವದಲ್ಲಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು.ಜಿಲ್ಲಾಡಳಿತಕ್ಕೆ ಸಡ್ಡು ಹೊಡೆದು ಪುತ್ಥಳಿ ಅನಾವರಣ ಮಾಡಿದರೂ ಪೊಲೀಸರು ಕಾರ್ಯಕ್ರಮಕ್ಕೆ ಸರ್ಪಗಾವಲು ಹಾಕಿ ನೆರವಾಗಿದ್ದು, ಜಿಜ್ಞಾಸೆಗೆ ಕಾರಣವಾಯಿತು. ಕಾರ್ಯಕ್ರಮಕ್ಕೂ ಮೊದಲು ಶ್ರೀರಾಮಸೇನೆ ಹಿಂದೂಸ್ತಾನ ಸಂಘಟನೆ ಸಂಸ್ಥಾಪಕ ರಮಾಕಾಂತ ಕೊಂಡೂಸ್ಕರ್ ಹಾಗೂ ಬೆಂಬಲಿಗರು ಪುತ್ಥಳಿ ಅನಾವರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸರು ಅವರನ್ನು ಸ್ಥಳದಿಂದ ಹೊರಗೆ ಕಳುಹಿಸಿದರು.

ಕೊಂಡೊಸ್ಕರ್ ಬಣದಿಂದ ವಿರೋಧ: ಮಹಾನಗರ ಪಾಲಿಕೆಯ 39.40 ಲಕ್ಷ ರೂ. ಅನುದಾನದಲ್ಲಿ ಪುತ್ಥಳಿ ಪ್ರತಿಷ್ಠಾಪನೆ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಪೂರ್ಣವಾಗಿದೆ ಎಂದು ಶಾಸಕ ಅಭಯ್ ಪಾಟೀಲ, ಪಾಲಿಕೆಯ ಮೇಯರ್, ಹಲವು ಸದಸ್ಯರು ಜ.5ರಂದು ಉದ್ಘಾಟನೆಗೆ ದಿನಾಂಕ ನಿಗದಿ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಮಾಕಾಂತ ಕೊಂಡೊಸ್ಕರ್ ಬಣದವರು, ಕಾಮಗಾರಿ ಪೂರ್ಣವಾಗದೇ ಪುತ್ಥಳಿ ಉದ್ಘಾಟಿಸುವುದು ಸರಿಯಲ್ಲ ಎಂದು ಜಿಲ್ಲಾಡಳಿತದ ಮೋರೆ ಹೋಗಿದ್ದರು. ಜಿಲ್ಲಾಧಿಕಾರಿ ನಡೆಸಿದ ಸಂಧಾನ ಸಭೆ ವಿಫಲವಾಗಿತ್ತು. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ, ಜ.5ರಂದು ನಡೆಯುವ ಉದ್ಘಾಟನೆಗೆ ಅನುಮತಿ ಕೊಟ್ಟಿಲ್ಲ ಎಂದು ಶನಿವಾರ ಹೇಳಿದ್ದರು. ಆದರೆ, ಜಿಲ್ಲಾಡಳಿತದಿಂದ ನಿರ್ದಿಷ್ಟ ದಿನಾಂಕ ಘೋಷಿಸದೇ ಗೊಂದಲ ಸೃಷ್ಟಿಸಿದ್ದರು. ಏತ್ಮಧ್ಯೆ ಮೇಯರ್ ಹಾಗೂ ಶಾಸಕ ಅಭಯ್ ಪಾಟೀಲ ನೇತೃತ್ವದಲ್ಲಿ ಭಾನುವಾರ ಪುತ್ಥಳಿ ಅನಾವರಣಗೊಂಡಿತು.

ಒತ್ತಡದಲ್ಲಿ ಅಧಿಕಾರಿಗಳು?: ಜನಪ್ರತಿನಿಧಿಗಳ ಒತ್ತಡದಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತಾಗಿದೆ. ಪುತ್ಥಳಿ ಅನಾವರಣ ಸ್ಥಳ ವಿವಾದದಲ್ಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೆ, ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಜಾಗದ ಯಾವುದೇ ವಿವಾದ ಇಲ್ಲ ಎಂದು ಸ್ಥಳೀಯ ಶಾಸಕರು ಹೇಳುತ್ತಾರೆ. ಇದೇ ವಿಚಾರವಾಗಿ ಕಾರ್ಯಕ್ರಮ ಸ್ಥಳದಲ್ಲಿ ಪಾಲಿಕೆ ಅಧಿಕಾರಿಗಳು ಭಾನುವಾರ ಮಧ್ಯಾಹ್ನ ಪುತ್ಥಳಿ ಅನಾವರಣ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿದ್ದರು. ಮೇಯರ್ ಸವಿತಾ ಕಾಂಬಳೆ ಅವರು ಬಂದು ಅವುಗಳನ್ನು ತೆಗೆಸಿದರು. ಒಟ್ಟಿನಲ್ಲಿ ಪ್ರತಿಮೆ ಅನಾವರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

ಕಾರ್ಯಕ್ರಮಕ್ಕೆ ಸರ್ಪಗಾವಲು: ಶಾಸಕ ಅಭಯ್ ಪಾಟೀಲ ಕಾರ್ಯಕ್ರಮಕ್ಕೆ 15 ಸಾವಿರ ಜನರನ್ನು ಕರೆತಂದು ಪುತ್ಥಳಿ ಅನಾವರಣ ಮಾಡುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಪೊಲೀಸರು ಅನಗೋಳ ಕ್ರಾಸ್ ಹಾಗೂ ಸಂಭಾಜಿ ವೃತ್ತ ಸಂಪರ್ಕಿಸುವ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು. ರಮಾಕಾಂತ ಕೊಂಡೂಸ್ಕರ್ ಬೆಂಬಲಿಗರು ಕಾರ್ಯಕ್ರಮ ಮೆರವಣಿಗೆ ವೇಳೆ ಧಿಕ್ಕಾರ ಕೂಗಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮತ್ತೊಮ್ಮೆ ಕಾರ್ಯಕ್ರಮ?

ಶಿಷ್ಟಾಚಾರ ಪ್ರಕಾರ ಕಾರ್ಯಕ್ರಮವಾಗಿಲ್ಲ. ಜಿಲ್ಲಾಡಳಿತದಿಂದ ಮತ್ತೊಮ್ಮೆ ಪುತ್ಥಳಿ ಅನಾವರಣ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿಕೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಜ.5ರಂದು ಮೇಯರ್ ನಿಗದಿ ಮಾಡಿದ್ದ ಕಾರ್ಯಕ್ರಮಕ್ಕೆ ಪ್ರಭಾವಿ ರಾಜಕಾರಣಿಯೊಬ್ಬರು ಬೇಕಂತಲೇ ಕೆಲವರನ್ನು ಮುಂದುಬಿಟ್ಟು ವಿರೋಧ ವ್ಯಕ್ತಪಡಿಸಿದ್ದಾರೆಂದು ಪಾಲಿಕೆಯ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಸಾಕಷ್ಟು ಅಡೆತಡೆಗಳ ಮಧ್ಯೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ. ಶಾಸಕ ಅಭಯ ಪಾಟೀಲ ಅವರಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. | ಶಿವೇಂದ್ರರಾಜೆ ಬೋಸ್ಲೆ ಶಿವಾಜಿ ಮಹಾರಾಜರ 13ನೇ ವಂಶಸ್ಥರು ಪುತ್ಥಳಿ ಅನಾವರಣಕ್ಕೆ ಬಹಳಷ್ಟು ಅಡೆತಡೆ ಆದವು. ಶಿವಾಜಿ ಹಾಗೂ ಸಂಭಾಜಿ ಭಕ್ತರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಭಗವಾಧ್ವಜ ಹಾರಾಡಿದೆ. ಕಾರ್ಯಕ್ರಮ ವಿರೋಧಿಸಿದವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು. | ಅಭಯ ಪಾಟೀಲ ಬೆಳಗಾವಿ ದಕ್ಷಿಣ ಶಾಸಕ