ಜಿಲ್ಲೆ

ಎಂಎಸ್‌ಐಎಲ್ ಮದ್ಯ ಮಳಿಗೆ ತೆರೆಯಲು ವಿರೋಧ ; ಮಹಾತ್ಮಗಾಂಧಿ ರಸ್ತೆಯಲ್ಲಿ ತೆರೆಯದಂತೆ ಮನವಿ ಸಲ್ಲಿಕೆ

Tumakuru

ತುಮಕೂರು: ನಗರದ ಜನನಿಬಿಡ ಮಹಾತ್ಮಗಾಂಧಿ ರಸ್ತೆಯಲ್ಲಿ ಎಂಎಸ್‌ಐಎಲ್ ಮದ್ಯ ಮಳಿಗೆ ತೆರೆಯಲು ಮುಂದಾಗಿದ್ದು, ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ವೇದಿಕೆ ಪದಾಧಿಕಾರಿಗಳು, ರಾಜ್ಯದಲ್ಲಿ 10000 ವೈನ್‌ಶಾಪ್, 500ಕ್ಕೂ ಹೆಚ್ಚು ಎಂಎಸ್‌ಐಎಲ್ ಮದ್ಯದಂಗಡಿಗಳಿವೆ. ವೇದಿಕೆ ವತಿಯಿಂದ ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಎಂಜಿ ರಸ್ತೆಯ ಪುಟ್ಟಣ್ಣಯ್ಯ ಕಾಪೌಂಡ್‌ನಲ್ಲಿ ಎಂಎಸ್‌ಐಎಲ್ ತೆರೆಯುವುದಕ್ಕೆ ವೇದಿಕೆ ತೀವ್ರ ವಿರೋಧವಿದ್ದು, ಜನವಸತಿ ಪ್ರದೇಶ ಜಾಗದಲ್ಲಿ ಎಂಎಸ್‌ಐಎಲ್ ಮದ್ಯ ಮಳಿಗೆ ತೆರೆಯಲು ನೀಡಿರುವ ಅನುಮತಿಯನ್ನು ತತ್‌ಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿದರು.

ಕಳೆದ 27 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮೂಲಕ ಮದ್ಯಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದು, ಈವರೆಗೆ 1355 ಶಿಬಿರಗಳ ಮೂಲಕ 1 ಲಕ್ಷಕ್ಕೂ ಹೆಚ್ಚು ವ್ಯಸನಿಗಳನ್ನು ಮದ್ಯಪಾನದಿಂದ ದೂರ ಮಾಡಲಾಗಿದೆ. ರಾಜ್ಯದಲ್ಲಿರುವ 30 ಜನಜಾಗೃತಿ ವೇದಿಕೆಗಳ ಮೂಲಕ ಮದ್ಯಪಾನದ ವಿರುದ್ಧ ನಿರಂತರ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಂದುವೇಳೆ ಎಂಎಸ್‌ಐಎಲ್‌ಗೆ ಅನುಮತಿಯನ್ನು ನೀಡಿ ಮದ್ಯದಂಗಡಿ ತೆರೆದರೆ ಜನಜಾಗೃತಿ ವೇದಿಕೆ ಮೂಲಕ ಸ್ಥಳೀಯರ ಅಪೇಕ್ಷೆಯಂತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರೆಸ್ ರಾಜಣ್ಣ, ಡಾ.ಸಂಜಯ್‌ನಾಯಕ್, ಅಮರನಾಥಶೆಟ್ಟಿ, ದಯಾಶೀಲ, ಪ್ರೇಮಾ ಹೆಗಡೆ, ಚನ್ನಕೇಶವ, ಗಣೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.