ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿ.ಸುನೀಲಕುಮಾರ್​ ಮಾತನಾಡಿದರು. ಕಿಶೋರಕುಮಾರ್​ ಕುಂದಾಪುರ, ಗುರ್ಮೆ ಸುರೇಶ್​ ಶೆಟ್ಟಿ, ಕಿರಣಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ, ಉದಯಕುಮಾರ್​ ಶೆಟ್ಟಿ, ವಿಜಯಕುಮಾರ ಉದ್ಯಾವರ, ರೇಷ್ಮಾ ಶೆಟ್ಟಿ, ಸಂಧ್ಯಾ ರಮೇಶ್​, ಗೀತಾಂಜಲಿ ಸುವರ್ಣ, ಪ್ರಥ್ವಿರಾಜ್​ ಶೆಟ್ಟಿ ಇತರರಿದ್ದರು. 
ಜಿಲ್ಲೆ

ರಾಜ್ಯದ ಜನರ ಕೈಗೆ ಚೊಂಬು ಕೊಟ್ಟ ಸಿಎಂ ಸಿದ್ದರಾಮಯ್ಯ

ವಿ.ಸುನೀಲಕುಮಾರ್​ ಆಕ್ರೋಶ | ಇಂಧನ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯದಲ್ಲಿ ಪೆಟ್ರೋಲ್​, ಡೀಸಲ್​ ಬೆಲೆ ಏರಿಸಿ ಉಳಿದ ರಾಜ್ಯಗಳಿಗೆ ಸರಿಸಮಾನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಚೊಂಬು ಪ್ರದರ್ಶಿಸಿ, ಇದೀಗ ರಾಜ್ಯದ ಜನರ ಕೈಗೆ ಚೊಂಬು ಕೊಟ್ಟಿದ್ದೀರಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲಕುಮಾರ್​ ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್​, ಡೀಸಲ್​ ಬೆಲೆ ಏರಿಕೆ ವಿರೋಧಿಸಿ ಉಡುಪಿ ಕಡಿಯಾಳಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಚೊಂಬು ಪ್ರದರ್ಶಿಸುತ್ತಲೇ ಮಾತನಾಡಿದರು.

ಮೊದಲು ದುರಹಂಕಾರ ಬಿಡಿ

ದೇಶದ ಎಲ್ಲ ರಾಜ್ಯಗಳಲ್ಲೂ ಪೆಟ್ರೋಲ್​ ದರ 94-95 ರೂ. ಇದೆ. ಆದರೆ, ಕಾಂಗ್ರೆಸ್​ ಆಡಳಿತ ಇರುವ ರಾಜ್ಯಗಳಲ್ಲಿ ಬೆಲೆ ಏರಿಕೆ ಆಗುತ್ತಿದೆ. 72 ಜನರಿಗೆ ಕ್ಯಾಬಿನೆಟ್​ ದರ್ಜೆ ಸಚಿವ ಸ್ಥಾನ ನೀಡಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವ ಸರ್ಕಾರಗಳೂ ಕ್ಯಾಬಿನೆಟ್​ ದರ್ಜೆಯ ಸಚಿವ ಸ್ಥಾನ ನೀಡಿಲ್ಲ. ಅವರಿಗೆಲ್ಲ ಟಿಎ, ಡಿಎ ಕೊಡಲು ಪೆಟ್ರೋಲ್​ ದರ ಏರಿಸಿದ್ದಾರೆ. ಸಿದ್ದರಾಮಯ್ಯ ತಾನು ಮಾಡಿದ್ದನ್ನೆಲ್ಲ ಸಮರ್ಥಿಸಿಕೊಳ್ಳುತ್ತಿದ್ದಾರೆ. ಮೊದಲು ದುರಹಂಕಾರ ಬಿಟ್ಟು ಜನಪರ ಆಡಳಿತ ನೀಡಿ ಎಂದು ಸಲಹೆ ನೀಡಿದರು.

ವರ್ಷ ಕಳೆದರೂ ಶಾಸಕರಿಗಿಲ್ಲ ಅನುದಾನ

ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಆಡಳಿತಕ್ಕೆ ಬಂದು ವರ್ಷ ಕಳೆದರೂ ಸಹ ರಾಜ್ಯದ ಯಾವುದೇ ಕ್ಷೇತ್ರದ ಶಾಸಕರಿಗೂ ಸಹ ಇದುವರೆಗೂ ಬಿಡಿಗಾಸು ನೀಡಿಲ್ಲ. ಅವರದೇ ಪಕ್ಷದ ಶಾಸಕರುಗಳೇ ಈ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಭಿವೃದ್ಧಿಯ ವಿಚಾರವಾಗಿ ಕ್ಷೇತ್ರದ ಜನರಿಗೆ ಶಾಸಕಾಗಿ ನನಗೆ ಉತ್ತರಿಸಲೂ ಆಗುತ್ತಿಲ್ಲ. ಇದೀಗ ಇಂಧನ ದರ ಏರಿಕೆ ಮಾಡಿದ್ದು, ಜನರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ ಎಂದರು.

ಪ್ರತಿಭಟನೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ, ಶಾಸಕರಾದ ಕಿರಣಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ, ಯಶ್​ಪಾಲ್​ ಸುವರ್ಣ, ಉಡುಪಿ-ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್​ ಶೆಟ್ಟಿ, ಜಿಲ್ಲಾ ವಕ್ತಾರ ವಿಜಯಕುಮಾರ ಉದ್ಯಾವರ, ಶ್ರೀಶ ನಾಯಕ್​, ರಾಜೇಶ್​ ಕಾವೇರಿ, ದಿನಕರ ಶೆಟ್ಟಿ, ರೇಷ್ಮಾ ಶೆಟ್ಟಿ, ಸಂಧ್ಯಾ ರಮೇಶ್​, ಗೀತಾಂಜಲಿ ಸುವರ್ಣ, ಮಟ್ಟಾರು ರತ್ನಾಕರ್​ ಹೆಗ್ಡೆ, ಕುತ್ಯಾರು ನವೀನ್​ ಶೆಟ್ಟಿ, ಪ್ರಥ್ವಿರಾಜ್​ ಶೆಟ್ಟಿ, ಶಿವಕುಮಾರ್​ ಅಂಬಲಪಾಡಿ, ಜಿಲ್ಲೆಯ ವಿವಿಧ ಮಂಡಳ ಹಾಗೂ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಅಧಿವೇಶನ ನಡೆಸಲೂ ನಾವು ಬಿಡುವುದಿಲ್ಲ

ಗ್ಯಾರಂಟಿ ಯೋಜನೆಯನ್ನು 5 ವರ್ಷ ಮುಂದುವರಿಸಲೇಬೇಕು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯವನ್ನೂ ಮಾಡಲೇಬೇಕು. ಇದಕ್ಕಾಗಿ ಜನರಿಗೆ ಹೆಚ್ಚುವರಿ ತೆರಿಗೆ ಹಾಕಬಾರದು. ಇದೀಗ ದಿಢೀರ್​ ಆಗಿ ಪೆಟ್ರೋಲ್​, ಡೀಸಲ್​ ದರ ಏರಿಸಿದ ರಾಜ್ಯ ಸರ್ಕಾರ ತನ್ನ ಆದೇಶ ವಾಪಸ್​ ಪಡೆಯುವವರೆಗೂ ಬಿಜೆಪಿ ಹೋರಾಟ ಮುಂದುವರಿಯಲಿದೆ. ವಿಧಾನಸಭಾ ಅಧಿವೇಶನದಲ್ಲಿ ಬೆಲೆ ಏರಿಕೆ ಬಗ್ಗೆ ಚರ್ಚೆ ಆಗಲಿದೆ. ಆ ಸಂದರ್ಭದಲ್ಲಿ ಆದೇಶ ವಾಪಸ್​ ಪಡೆಯುವ ತನಕ ಅಧಿವೇಶನ ನಡೆಸಲು ನಾವು ಬಿಡುವುದಿಲ್ಲ ಎಂದು ವಿ.ಸುನೀಲ್​ಕುಮಾರ್​ ಎಚ್ಚರಿಕೆ ನೀಡಿದರು.

ವರ್ಷ ಕಳೆದರೂ ರಾಜ್ಯದ ಅಭಿವೃದ್ಧಿಯಲ್ಲಿ ತೊಡಗದ ಕಾಂಗ್ರೆಸ್​ ಸರ್ಕಾರ ತನ್ನ ಬಿಟ್ಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿದೆ. ಇದೀಗ ಇಂಧನ ಬೆಲೆಯನ್ನೂ ಏರಿಸಿ ಜನರ ಜೇಬಿಗೆ ಕತ್ತರಿ ಹಾಕಿದೆ. ಕೂಡಲೇ ಸರ್ಕಾರ ಬೆಲೆ ಏರಿಕೆ ಆದೇಶ ವಾಪಸ್​ ಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯದ ಎಲ್ಲ ಮಂಡಳ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಹೋರಾಟ ಮುಂದುವರಿಸಲಿದೆ. ಕಿಶೋರಕುಮಾರ್​ ಕುಂದಾಪುರ. ಜಿಲ್ಲಾಧ್ಯಕ್ಷ, ಬಿಜೆಪಿ ಉಡುಪಿ