ಜಿಲ್ಲೆ

ಆರ್​ಟಿಇ ಅರ್ಜಿ ಸಲ್ಲಿಸಲು ಅವಕಾಶ

ಕೋಲಾರ ಡೆಸ್ಕ್

ಕೋಲಾರ: ಆರ್​ಟಿಇ ಅಡಿ ಖಾಸಗಿ ಶಾಲೆಗಳ ದಾಖಲಾತಿಗೆ ಪಾಲಕರು ಅರ್ಜಿ ಸಲ್ಲಿಸಲು ಏ.15 ರಿಂದ ಮೇ 12 ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ತಿಳಿಸಿದರು. ನಗರದಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿ, ಪಾಲಕರು ಆನ್​ಲೈನ್​ನಲ್ಲಿ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಪರಿಶೀಲನಾ ಕಾರ್ಯ

ಏ.16 ರಿಂದ ಮೇ 14 ರವರೆಗೂ ನಡೆಯಲಿದೆ. ಮೇ 17ಕ್ಕೆ ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ಮಾಡಲಾಗುವುದು, ಆನ್​ಲೈನ್​ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಮೇ21 ರಂದು ನಡೆಯಲಿದೆ ಎಂದರು. ಶಾಲೆಗಳಲ್ಲಿ ಮೇ 22 ರಿಂದ ಮೇ 31 ರವರೆಗೂ ದಾಖಲಾತಿ ಆರಂಭಗೊಳ್ಳುತ್ತಿದ್ದು, ಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಡೆಯಲಿದೆ. ಇದಾದ ನಂತರ ಶಾಲಾ ಮುಖ್ಯಸ್ಥರು ಶಾಲೆಗೆ ದಾಖಲಾತಿ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ಅಪ್​ಲೋಡ್​ ಮಾಡಲು ಮೇ 22 ರಿಂದ ಜೂ.4 ರವರೆಗೂ ಅವಕಾಶ ನೀಡಲಾಗಿದೆ ಎಂದರು. ಆನ್​ಲೈನ್​ ತಂತ್ರಾಂಶದ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಜೂ.9 ರಂದು ಆಯುಕ್ತರ ಕಚೇರಿಯ ಎನ್​ಐಸಿಇ -ಆಡಳಿತ ಹಾಗೂ ಸಾಫ್ಟ್​ವೇರ್​ ಡೆವಲಪ್ಮೆಂಟ್​ ಕೇಂದ್ರದಲ್ಲಿ ನಡೆಯಲಿದೆ. 2ನೇ ಸುತ್ತಿನ ಸೀಟು ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿಗೆ ಜೂ.10 ರಿಂದ ಜೂ.20ರವರೆಗೂ ನೀಡಲಾಗಿದ್ದು, ಶಾಲೆಗಳವರು ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳ್ನು ಜೂ.11 ರಿಂದ ಜೂ.25 ರೊಳಗೆ ಆನ್​ಲೈನ್​ ತಂತ್ರಾಂಶಗಳಲ್ಲಿ ಅಳವಡಿಸಬೇಕು ಎಂದರು.

ದಾಖಲಾತಿಗೆ ಅವಕಾಶ: ಕೋಲಾರ ತಾಲೂಕಿನ ದಿಂಬ ಗ್ರಾಮದ ರಾಧಾಕೃಷ್ಣ ಪ್ರಾಥಮಿಕ ಶಾಲೆ, ಕೆಂಬೋಡಿ ಜನತಾ ಪ್ರಾಥಮಿಕ ಶಾಲೆ, ಸುಗಟೂರಿನ ಸಬರಮತಿ ಪ್ರೌಢಶಾಲೆ, ತಲಗುಂದದ ಜ್ಞಾನಮಂದಿರ ಶಾಲೆ, ನಗರದ ಗಾಂಧಿನಗರದ ಆನಂದಮೂರ್ತಿ ಶಾಲೆ, ಕೋಲಾರದ ಮಹಿಳಾ ಸಮಾಜ ಕನ್ನಡ ಮಾಧ್ಯಮ ಶಾಲೆ, ಹಾರೋಹಳ್ಳಿಯ ರಮಣಮಹರ್ಷಿ ವಿದ್ಯಾಲಯ, ಕೋಲಾರದ ಕಾರಂಜಿಕಟ್ಟೆಯ ಸುಭಾಷ್​ಶಾಲೆ, ಕ್ಯಾಲನೂರು ಕ್ರಾಸ್​ ವಿಶ್ವನಗರದ ಅರುಣೋದಯ ಶಾಲೆ, ಮಿಟ್ಟಕಲ್ಲಹಳ್ಳಿಯ ಆರ್​.ಎಲ್​.ಜಾಲಪ್ಪ ಕೇಂದ್ರೀಯ ಶಾಲೆಗಳಿಗೆ ಆರ್​ಟಿಇ ಅಡಿ

ದಾಖಲಾತಿಗೆ ಅವಕಾಶ ನೀಡಲಾಗಿದೆ.