ಆಲೂರು: ಸಂತೆ ಸ್ಥಳಾಂತರಕ್ಕೆ ಯಾವುದೇ ಅವಕಾಶವಿಲ್ಲ. ಸ್ವಚ್ಛತೆಯ ದೃಷ್ಟಿಯಿಂದ ವಾಟೆಹೊಳೆ ಜಲಾಶಯದ ಇಲಾಖೆಗೆ ಸೇರಿದ ಕವರ‌್ಡಕ್ ಜಾಗದಲ್ಲಿ ವಾರದ ಸಂತೆಯನ್ನು ನಡೆಸಲಾಗುವುದು. ಬೀದಿ ಬದಿ ತರಕಾರಿ ವ್ಯಾಪಾರಸ್ಥರಿಗೆ ಸದ್ಯದಲ್ಲಿಯೇ ಸೂಕ್ತ ಜಾಗದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಸಿಕೊಡಲಾಗುವುದು ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಭರವಸೆ ತಿಳಿಸಿದರು.
ಪಟ್ಟಣದ ಹೃದಯ ಭಾಗದಲ್ಲಿ ಈ ಹಿಂದೆ ನಡೆಯುತ್ತಿದ್ದ ಸಂತೆ ಜಾಗಕ್ಕೆ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕರೋನಾ ವೈರಸ್ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ತಾಲೂಕು ಆಸ್ಪತ್ರೆ ಎದುರು ನಡೆಯುತ್ತಿದ್ದ ತರಕಾರಿ ಮಾರುಕಟ್ಟೆಯನ್ನು ವಾಟೆಹೊಳೆ ಜಲಾಶಯಕ್ಕೆ ಸೇರಿದ ಕವರ‌್ಡಕ್ ಜಾಗ ವಿಶಾಲವಾಗಿದ್ದು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರಿಹೋಗುತ್ತದೆ. ಅಲ್ಲಿ ಮಾರುಕಟ್ಟೆ ನಡೆಸಲು ಸಮಿತಿ ತೀರ್ಮಾನಿಸಿ ಅವಕಾಶ ಕಲ್ಪಿಸಿತ್ತು. ಆದರೆ, ವ್ಯಾಪಾರಸ್ಥರು ವ್ಯಾಪಾರಕ್ಕೆ ತೊಂದರೆಯುಂಟಾಗುತ್ತಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಅನುಕೂಲವಾಗುವಂತಹ ಸ್ಥಳವನ್ನು ಸದ್ಯದಲ್ಲಿ ಗುರುತಿಸುವ ಸಲುವಾಗಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಎಪಿಎಂಸಿ ಅಧ್ಯಕ್ಷರಾದ ಕೆ.ಎಸ್.ಮಂಜೇಗೌಡ ಮಾತನಾಡಿ, ಆಲೂರು ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಜನಜಂಗುಳಿ ಹೆಚ್ಚಾಗುತ್ತಿದೆ. ಆದ್ದರಿಂದ 20 ವರ್ಷಗಳಿಂದ ಸಂತೆ ಸ್ಥಳವನ್ನು ಸ್ಥಳಾಂತರಿಸಬೇಕೆಂದು ಹೋರಾಟ ಮಾಡುತ್ತ ಬಂದಿದ್ದು ಇತ್ತೀಚೆಗೆ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಆದೇಶ ನೀಡಿದ ಹಿನ್ನೆಯಲ್ಲಿ ಹೆಚ್ಚು ಜನ ಸೇರುತ್ತಿದ್ದ ಸಂತೆ ಸ್ಥಳವನ್ನು ಸ್ಥಳಾಂತರಿಸಲಾಗಿದೆ. ಅಲ್ಲಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸಿದರು.
ತಹಸೀಲ್ದಾರ್ ಶಿರೀನ್ ತಾಜ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಸತೀಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ತೌಫಿಕ, ಅಬ್ದುಲ್ ಖುದ್ದುಸ್, ಸಬ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ್, ಬೀದಿಬದಿ ವ್ಯಾಪಾರಸ್ಥರ ಸಂಘದ ಅದ್ಯಕ್ಷ ಪ್ರಶಾಂತ್ ಗಾಂಧಿ, ದಲಿತ ಮುಖಂಡರಾದ ಬಸವರಾಜು, ಅರಸಯ್ಯ ಸೇರಿದಂತೆ ವ್ಯಾಪಾರಸ್ಥರು ಹಾಜರಿದ್ದರು.