ಕೋಟ: ಕೋಟ ವಿವೇಕ ವಿದ್ಯಾಸಂಸ್ಥೆ ಕೋಟದ ಗ್ರಾಮೀಣ ಪರಿಸರದಲ್ಲಿ ಇದ್ದರೂ ಇದು ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪಾಠದೊಂದಿಗೆ ಪಾಠೇತರ ಚಟುವಟಿಕೆಗಳಲ್ಲೂ ಕೂಡ ಸಮಾನ ಸ್ಥಾನ ನೀಡಲಾಗುತ್ತಿದೆ ಎಂದು ಮಣಿಪಾಲ ಮಾಹೆ ಎಂ.ಸಿ.ಎಚ್.ಪಿ ಫಿಜಿಯೋಥೆರಪಿ ವಿಭಾಗದ ಪ್ರೊ.ಡಾ.ಜಿ.ಅರುಣ್ ಮಯ್ಯ ಹೇಳಿದರು.
ಕೋಟ ವಿದ್ಯಾ ಸಂಘ ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾ ಸಂಘ ಅಧ್ಯಕ್ಷ ಸಿ.ಎ.ಪಿ.ಪ್ರಭಾಕರ್ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ., ರಾಮದೇವ ಐತಾಳ, ಕೋಶಾಧಿಕಾರಿ ವಲೇರಿಯನ್ ಮೆನೇಜಸ್ ಮತ್ತು ಜತೆ ಕಾರ್ಯದರ್ಶಿ ಪಿ.ಮಂಜುನಾಥ್ ಉಪಾಧ್ಯ ಉಪಸ್ಥಿತರಿದ್ದರು. ಪ್ರಾಂಶುಪಾಲ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕ ರವಿ ಕಾರಂತ್ ವಂದಿಸಿದರು. ಉಪನ್ಯಾಸಕ ಸದಾಶಿವ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.
ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ ಶ್ರೀಪ್ರಿಯಾ ಪಿ.ಅಡಿಗ ಮತ್ತು 9ನೇ ಸ್ಥಾನ ಗಳಿಸಿದ ಅಕ್ಷಯ ಶಾಸ್ತ್ರಿ, ವಿಭಾವನ ಹೇರಳೆ ಮತ್ತು ನಾಟಾ ಎಕ್ಸಾಂನಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಗಳಿಸಿದ ಶ್ರೀ ಲಕ್ಷ್ಮೀ ಸೋಮಯಾಜಿ ಅವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು. 232 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪಾಲಕರ ಸಮ್ಮುಖದಲ್ಲಿ ಗುರುತಿಸಲಾಯಿತು.