ಜಿಲ್ಲೆ

ಅನುಮತಿ ಸಿಕ್ಕ ಬಳಿಕ ಕೋರ್ಟ್ ಆರಂಭ: ಕನಕಗಿರಿಯಲ್ಲಿ ನ್ಯಾಯಾಧೀಶ ಎಂ.ಜಿ.ಶಿವಳ್ಳಿ ಹೇಳಿಕೆ

ಕನಕಗಿರಿ: ಪಟ್ಟಣಕ್ಕೆ ಮಂಜೂರಾಗಿರುವ ನ್ಯಾಯಾಲಯಕ್ಕೆ ಕನಕಾಚಲ ದೇವಸ್ಥಾನದ ಯಾತ್ರಿ ನಿವಾಸದ ನೆಲ ಮಹಡಿ ಹಾಲ್‌ಗಳು ಸೂಕ್ತವಾಗಿವೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಂ.ಜಿ.ಶಿವಳ್ಳಿ ಹೇಳಿದರು.
ಗುರುವಾರ ಸಂಜೆ ಕಟ್ಟಡ ಪರಿಶೀಲನೆ ನಡೆಸಿ ಮಾತನಾಡಿದರು. ಕೋರ್ಟ್ ಕಲಾಪ ಹಾಗೂ ಸಿಬ್ಬಂದಿ, ದಾಖಲೆಗಳ ನಿರ್ವಹಣೆಗೆ ತಲಾ ಒಂದು ಹಾಲ್ ಬೇಕಿದ್ದು, ದೇವಸ್ಥಾನಕ್ಕೆ ಸೇರಿದ ಕಟ್ಟಡ ಸೂಕ್ತವಾಗಿದೆ. ಈ ಬಗ್ಗೆ ಹೈಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅನುಮತಿ ಸಿಕ್ಕ ಬಳಿಕ ಪಟ್ಟಣದಲ್ಲಿ ಕೋರ್ಟ್ ಆರಂಭಿಸಲಾಗುವುದು ಎಂದರು. ಇದಕ್ಕೂ ಪೂರ್ವದಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ಈ ಕಟ್ಟಡದಲ್ಲಿ ನ್ಯಾಯಾಲಯ ಆರಂಭಿಸಲು ಒಪ್ಪಿಗೆ ಪತ್ರ ನೀಡಲು ತಹಸೀಲ್ದಾರ್ ಧನಂಜಯಗೆ ತಿಳಿಸಿದರು.
ನ್ಯಾಯಾಧೀಶರಾದ ರಮೇಶ ಗಾಣಿಗೇರ, ಶ್ರೀದೇವಿ ದರ್ಬೆರ, ಗೌರಮ್ಮ, ಶಾಸಕ ಬಸವರಾಜ ದಢೇಸುಗೂರು, ಗಂಗಾವತಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಖಜಾಂಚಿ ವೆಂಕಟೇಶ, ವಕೀಲರಾದ ಪಂಪಯ್ಯಸ್ವಾಮಿ, ಶರಣೇಗೌಡ, ಬಸವರಾಜ, ಹನುಮೇಶ ಕನಕಗಿರಿ, ನಾಗರಾಜ ಬಿಲ್ಗಾರ್, ಮಾರುತಿ, ರಾಮಣ್ಣ ಹುಲಿಹೈದರ್ ಇತರರಿದ್ದರು.
ಸಂತಸ ವ್ಯಕ್ತಪಡಿಸಿದ ನ್ಯಾಯಾಧೀಶರು: ಕೋರ್ಟ್ ಆರಂಭಕ್ಕೆ ಕಾರಟಗಿಯಲ್ಲಿ ಕಟ್ಟಡಗಳನ್ನು ಪರಿಶೀಲಿಸಿದ ನಂತರ ಪಟ್ಟಣಕ್ಕೆ ಆಗಮಿಸಿದ ನ್ಯಾಯಾಧೀಶರು, ಯಾತ್ರಿ ನಿವಾಸದ ಕಟ್ಟಡ ವೀಕ್ಷಿಸಿ ನ್ಯಾಯಾಲಯ ಆರಂಭಿಸಲು ಸೂಕ್ತವಾಗಿರುವುದು ಸಂತಸವಾಗಿದೆಯೆಂದು ಅಧಿಕಾರಿಗಳು ಹಾಗೂ ವಕೀಲರ ಮುಂದೆ ಹಂಚಿಕೊಂಡರು.