ಜಿಲ್ಲೆ

ಚಿತ್ರದುರ್ಗದಲ್ಲಿ ನೇತ್ರ ಅಳವಡಿಕೆ ಸೌಲಭ್ಯ

Davangere - Desk - Mahesh Babu E

ಚಿತ್ರದುರ್ಗ: ನೇತ್ರ ಅಳವಡಿಕೆಯ ಸೌಲಭ್ಯವನ್ನು ಚಿತ್ರದುರ್ಗದಲ್ಲೇ ಕಲ್ಪಿಸಬೇಕೆಂಬ ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಬಸವೇಶ್ವರ ಕಾಲೇಜು ಮತ್ತು ಆಸ್ಪತ್ರೆ ಸಂಶೋಧನಾ ಕೇಂದ್ರದ ಡೀನ್ ಡಾ.ಇ.ಪ್ರಶಾಂತ್ ಭರವಸೆ ನೀಡಿದರು.

ಐ ಬ್ಯಾಂಕ್ ಸಹಯೋಗದಲ್ಲಿ ನಗರದ ಬಸವೇಶ್ವರ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಸಮಾರೋಪದಲ್ಲಿ ಮಾತನಾಡಿ, ಐ ಬ್ಯಾಂಕ್ ಕಳೆದ 17 ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೇತ್ರದಾನಿಗಳಿಂದ ಪಡೆದ ಕಣ್ಣುಗಳನ್ನು ಇಬ್ಬರು ಅಂಧರಿಗೆ ಅಳವಡಿಸಲಾಗುತ್ತಿದೆ. ಸದ್ಯ ನೇತ್ರಗಳನ್ನು ಪಡೆದು ಅವುಗಳ ಅಳವಡಿಕೆಗಾಗಿ ಬೇರೆಡೆಗೆ ಕಳುಹಿಸಲಾಗುತ್ತಿದೆ. ಈ ಕಾರ‌್ಯವನ್ನು ನಗರದಲ್ಲೇ ಮಾಡಲು ಸೂಕ್ತ ವ್ಯವಸ್ಥೆ ಒದಗಿಸಬೇಕೆಂಬ ಬ್ಯಾಂಕ್‌ನ ಮನವಿಯನ್ನು ಪರಿಶೀಲಿಸಲಾಗುವುದು ಎಂದರು.

ಡಾ.ಈಶ್ವರಪ್ಪ ಮಾತನಾಡಿ, ನೇತ್ರದಾನ ಪಾಕ್ಷಿಕದ ವೇಳೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಕಣ್ಣುಗಳಿಗೆ ಬೇಡಿ ಕೆ ಹೆಚ್ಚಾಗುತ್ತಿರುವ ಈ ಹಿನ್ನೆಲೆಯಲ್ಲಿ ನೇತ್ರದಾನಿಗಳ ಸಂಖ್ಯೆ ಕೂಡ ಹೆಚ್ಚಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆ ಅಧೀಕ್ಷಕ ಡಾ. ಎಲ್.ಪಾಲಾಕ್ಷಯ್ಯ ಮಾತನಾಡಿ, ಉದ್ದೇಶಿತ ಡಯಾಲಿಸಿಸ್ ಕೇಂದ್ರವನ್ನು ನಮ್ಮ ಆಸ್ಪತ್ರೆ ಆವರಣದಲ್ಲೇ ನಿರ್ಮಿಸಿದರೆ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ರೋಟರಿ ಸಂಸ್ಥೆಯನ್ನು ಕೋರಿದರು.

ಶಿಬಿರದ ಸಂಚಾಲಕ ಎಸ್.ವೀರೇಶ್ ವರದಿ ವಾಚಿಸಿದರು. ಬಸವೇಶ್ವರ ಆಸ್ಪತ್ರೆ ನೇತ್ರ ವಿಭಾಗದ ಎಚ್‌ಒಡಿ ಡಾ.ಎಚ್.ಪ್ರಭುದೇವ್, ಐ ಬ್ಯಾಂಕ್ ಅಧ್ಯಕ್ಷ ಪಿ.ಬಿ.ಶಿವರಾಮ್ ಇದ್ದರು. ಗಾಯತ್ರಿ ಶಿವರಾಂ ನಿರೂಪಿಸಿದರು. ಹೇಮಲತಾ ಮತ್ತು ಸಿದ್ದಗಂಗಾ ಪ್ರಾರ್ಥಿಸಿದರು. ಮಧುಪ್ರಸಾದ್ ಸ್ವಾಗತಿಸಿದರು. ಚಂದ್ರಮೋಹನ್ ವಂದಿಸಿದರು.