ಮಂಗಳೂರು ಪಾಲಿಕೆಯ ಮೇಯರ್ ಕೊಠಡಿಯಲ್ಲಿ ಬುಧವಾರ ಫೋನ್‌ಇನ್ ಕಾರ್ಯಕ್ರಮದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಸಾರ್ವಜಮನಿಕರ ಅನೇಕ ಕುಂದುಕೊರತೆಗಳನ್ನು ಆಲಿಸಿದರು. 
ಜಿಲ್ಲೆ

ಟೈಗರ್ ಕಾರ್ಯಾಚರಣೆ ಪುನರಾರಂಭ

Mangaluru - Shravan Kumar Nala

ಮಂಗಳೂರು: ನಗರದ ಹಲವಡೆ ಅನಧಿಕೃತ ಬೀದಿ ವ್ಯಾಪಾರ ಹೆಚ್ಚಳವಾಗಿದ್ದು, ನಾಗರೀಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬೀದಿ ಬದಿಯಲ್ಲಿ ಆಹಾರ ಉತ್ಪಾದಿಸಿ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿರುವ ಅನಧಿಕೃತ ಬೀದಿ ವ್ಯಾಪಾರವನ್ನು ತಡೆಯಲು ಮುಂದಿನ ಸೋಮವಾರದಿಂದ ಟೈಗರ್ ಕಾರ್ಯಾಚರಣೆ ಪುನರಾರಂಭಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಮಂಗಳೂರು ಪಾಲಿಕೆಯ ಮೇಯರ್ ಕೊಠಡಿಯಲ್ಲಿ ಬುಧವಾರ ಫೋನ್‌ಇನ್ ಕಾರ್ಯಕ್ರಮದಲ್ಲಿ ಈ ಕುರಿತು ಹಲವಾರು ದೂರುಗಳ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ನಗರದ ಕಂಕನಾಡಿ, ಕೆಎಸ್‌ಆರ್‌ಟಿಸಿ, ಅತ್ತಾವರ, ಮಣ್ಣಗುಡ್ಡ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಬದಿ ಗೂಡಂಗಡಿಗಳಲ್ಲಿ ಹಾರ ಪದಾರ್ಥ ಸೇರಿದಂತೆ ಬೀದಿ ವ್ಯಾಪಾರ ಹೆಚ್ಚುತ್ತಿದೆ. ಇದರಿಂದ ಸಾರ್ವಜನಿಕ ಪ್ರಯಾಣಿಕರ ಓಡಾಟಕ್ಕೆ ಮಾತ್ರವಲ್ಲದೆ, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿರುವ ಬಗ್ಗೆ ದೂರು ಬರುತ್ತಿವೆ. ತಳ್ಳು ಗಾಡಿಗಳನ್ನು ಹೊರತುಪಡಿಸಿ ನಗರದ ವಿವಿಧ ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಟೆಂಟ್ ಸೇರಿದಂತೆ ಶಾಶ್ವತ ವ್ಯವ್ಥೆಯೊಂದಿಗೆ ವ್ಯಾಪಾರ ನಡೆಸುತ್ತಿರುವವರನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಲಾಗುವುದು ಎಂದರು.

*ವ್ಯಾಪಾರ ನಡೆಸಲು ಅಗತ್ಯ ಕ್ರಮ

ಕಂಕನಾಡಿ, ಬಲ್ಮಠ ಮೊದಲಾದ ಕಡೆ ಬೀದಿ ಬದಿ ವ್ಯಾಪಾರ ಹಾವಳಿ ಹೆಚ್ಚಾಗಿದೆ. ಕಾಂಕ್ರೀಟ್ ರಸ್ತೆಯಲ್ಲಿ ಚೇರ್ ಹಾಕಿ ವ್ಯಾಪಾರ ನಡೆಸಲಾಗುತ್ತಿದೆ. ಕೊಳಕು ನೀರು, ಪ್ಲಾಸ್ಟಿಕ್ ಬಳಕೆ, ಗ್ಯಾಸ್ ಬಳಕೆ ಮಾಡುವ ಮೂಲಕ ಅಪಾಯಕಾರಿ ಪರಿಸ್ಥತಿ ಇದೆ ಎಂದು ಜೋಸೆಫ್ ಡಿಸೋಜಾ ದೂರಿದರು. ನಗರ ವ್ಯಾಪ್ತಿಯ ಲೇಡಿಗೋಶನ್ ಬಳಿ ಎರಡು ಕಡೆ, ಸುರತ್ಕಲ್, ಮಣ್ಣಗುಡ್ಡ, ಕಾವೂರು ಸೇರಿ ಐದು ಕಡೆ ವ್ಯಾಪಾರ ವಲಯಗಳನ್ನು (ವೆಂಡಿಂಗ್ ರೆನ್) ಗುರುತಿಸಲಾಗಿದೆ. ಒಂದು ತಿಂಗಳೊಳಗೆ ಬೀದಿ ಬದಿ ವ್ಯಾಪಾರಿಗಳು ಈ ಜಾಗದಲ್ಲಿಯೇ ವ್ಯಾಪಾರ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು. ಮಣ್ಣಗುಡ್ಡ ಪ್ರದೇಶದ ವ್ಯಾಪಾರ ವಲಯಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಈ ಸಂದರ್ಭ ತಿಳಿಸಿದರು.

ಬಹುತೇಕರಿಗೆ ಮಾನವೀಯ ನೆಲೆಯಲ್ಲಿ ವ್ಯಾಪಾರಕ್ಕೆ ಅವಕಾಸ ನೀಡಲಾಗಿದೆ. ಆದರೆ ಇತ್ತೀಚೆಗೆ ಏರ್‌ಪೋರ್ಟ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರ ತೆರವಿಗೆ ಹೋದ ಅಧಿಕಾರಿಗಳ ವಿರುದ್ಧ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅಧಿಕಾರಿಗಳ ಧೈರ್ಯ ಕುಂದಿಸುವ ಕಾರ್ಯ ನಡೆಸಿದ್ದಾರೆ ಎಂದು ಮೇಯರ್ ಅಸಮಾಧಾ ವ್ಯಕ್ತಪಡಿಸಿದರು.

---------------------

ಸಾರ್ವಜನಿಕರಿಂದ ಮೇಯರ್‌ಗೆ ದೂರುಗಳ ಸರಮಾಲೆ

ಗುಜ್ಜರೆಕೆರೆ ಅಭಿವೃದ್ಧಿಯಾಗಿದ್ದರೂ ತೀರ್ಥ ಕೆರೆಗೆ ಮುಕ್ತಿ ಸಿಕ್ಕಿಲ್ಲ. ಚರಂಡಿ ನೀರು ಕೆರೆಗೆ ಸೇರುವುದು ನಿಂತಿಲ್ಲ ಎಂದು ನೇಮು ಕೊಟ್ಟಾರಿ ಎಂಬವರು ದೂರಿದಾಗ, ಮಹಾತ್ಮಗಾಂಧಿ ವಿಕಾಸ ಯೋಜನೆಯಡಿ ಈ ಕೆರೆಯ ಸಮಸ್ಯೆ ಬಗೆಹರಿಸಲು ಯೋಜನೆ ಇದೆ. ಆದರೆ ರಾಜ್ಯ ಸರಕಾರದಿಂದ ಅನುದಾನ ಬಾರದೆ ತೊಂದರೆ ಆಗಿದೆ. ಇದಕ್ಕೆ ಶೀಘ್ರವೇ ಅಗತ್ಯ ಹಣ ಮೀಸಲಿಟ್ಟು ಕ್ರಮ ವಹಿಸುವುದಾಗಿ ಮೇಯರ್ ಹೇಳಿದರು. ಕೊಡಿಯಾಲ್‌ಬೈಲ್ ರಸ್ತೆ ಅಗೆದು ಬಿಟ್ಟಿರುವ ಕಾರಣ ಮಳೆ ನೀರು ನಿಂತು ತೊಂದರೆಯಾಗುತ್ತಿದೆ ಎಂದು ರಂಜಿತ್ ಎಂಬವರು ದೂರಿದರು. ವಾಮಂಜೂರಿನ ತಿರುವೈಲ್ ವಾರ್ಡ್‌ನಲ್ಲಿ ಡ್ರೈನೇಜ್ ವ್ಯವಸ್ಥೆ ಆಗಿ ಎರಡು ವರ್ಷವಾಗಿದ್ದರೂ ಮನೆಗಳಗೆ ಸಂಪರ್ಕ ಒದಗಿಸಿಲ್ಲ ಎಂದು ಆಸ್ಟಿನ್ ಡಿಸೋಜಾ ದೂರಿದಾಗ, ತಕ್ಷಣ ಕ್ರಮ ವಹಿಸುವುದಾಗ ಮೇಯರ್ ಭರವಸೆ ನೀಡಿದರು.

--------------------

ಇವಿ ಆಟೋರಿಕ್ಷಾಗಳಿಗೆ ತೊಂದರೆ

ಮಂಗಳೂರಿನಲ್ಲಿ ಇಲೆಕ್ಟ್ರಿಕ್ ಆಟೋರಿಕ್ಷಾಗಳ ನೋಂದಣಿ ಆಗುತ್ತಿದೆ. ಸುಮಾರು 600ರಷ್ಟು ಇಂತಹ ಇಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ದುಡಿಮೆಗೆ ತೊಂದರೆಯಾಗಿದೆ. ಸಾಲದ ಕಂತು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಫೋನ್ ಇನ್ ಕಾರ್ಯಕ್ರಮದ ವೇಳೆ ಹಲವರು ದೂರಿದರು. ಸದ್ಯ ನಗರ ವ್ಯಾಪ್ತಿಯಲ್ಲಿ ಇಲೆಕ್ಟ್ರಿಕ್ ರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿದ ಸುಮಾರು ಆರು ಸಾವಿರದಷ್ಟು ಇರುವ ಇತರ ರಿಕ್ಷಾದವರಿಗೆ ಈಗಾಗಲೇ ಬಾಡಿಗೆ ಇಲ್ಲದೆ ತೊಂದರೆ ಆಗುತ್ತಿದೆ ಎಂಬ ದೂರು ಇದೆ. ಈ ಬಗ್ಗೆ ಆರ್‌ಟಿಒ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.