ಕುಷ್ಟಗಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಂದಿನ ರಸ್ತೆಯನ್ನು ಅತಿಕ್ರಮಿಸಿ ನಿರ್ಮಿಸಿದ ಕಟ್ಟೆ, ಮೆಟ್ಟಿಲುಗಳನ್ನು ಗುರುವಾರ ಸಂಜೆ ತೆರವುಗೊಳಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್, ಇಂಜಿನಿಯರ್ ಶಿಲ್ಪಾ ಇತರರು ಇದ್ದರು.  
ಜಿಲ್ಲೆ

ಅತಿಕ್ರಮ ತೆರವಿಗೆ ಮುಂದಾದ ಪುರಸಭೆ, ಜೆಜಿಬಿ ಮೂಲಕ ಕಾರ್ಯಾಚರಣೆ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದಿನ ರಸ್ತೆಯ ಅತಿಕ್ರಮ ತೆರವಿಗೆ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್ ನೇತೃತ್ವದಲ್ಲಿ ಗುರುವಾರ ಸಂಜೆ ಕಾರ್ಯಾಚರಣೆ ನಡೆಯಿತು.

30 ಅಡಿ ಅಗಲದ ರಸ್ತೆ ಅಳತೆ ಮಾಡಿದ ಅಧಿಕಾರಿಗಳು, ರಸ್ತೆಗೆ ವ್ಯಾಪಿಸಿದ್ದ ಕಟ್ಟೆ, ಮೆಟ್ಟಿಲುಗಳನ್ನು ಗುರುತಿಸಿ ಜೆಸಿಬಿಯಿಂದ ತೆರವುಗೊಳಿಸಿದರು. ಭಾಗಶಃ ರಸ್ತೆಗೆ ವ್ಯಾಪಿಸಿದ್ದ ಕುಡಿವ ನೀರು ಶುದ್ಧೀಕರಣ ಘಟಕದ ಶೆಡ್ ತೆರವಿಗೆ ಒಂದು ದಿನದ ಕಾಲಾವಕಾಶ ನೀಡಲಾಯಿತು. ಮುಂದುವರಿದು ಕೆಲ ಮನೆಗಳ ಕಟ್ಟಡಗಳೂ ರಸ್ತೆಗೆ ವ್ಯಾಪಿಸಿದ್ದು ಕಂಡುಬಂದು ತೆರವಿಗೆ ಮುಖ್ಯಾಧಿಕಾರಿ ಸೂಚಿಸಿದರು. ಪಟ್ಟಣದಲ್ಲಿ ಬಹುತೇಕ ಕಟ್ಟಡಗಳು ರಸ್ತೆಗೆ ವ್ಯಾಪಿಸಿವೆ.

ಎಲ್ಲವನ್ನೂ ತೆರವುಗೊಳಿಸುವುದು ಅಸಾಧ್ಯದ ಮಾತು. ಸಂಚಾರಕ್ಕೆ ಅನುಕೂಲವಾಗುವಂತೆ ಸಾಧ್ಯವಾದಷ್ಟು ತೆರವುಗೊಳಿಸಿ ಕಾಮಗಾರಿ ಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಪುರಸಭೆ ಸದಸ್ಯ ಕಲ್ಲೇಶ ತಾಳದ್ ಸಲಹೆ ನೀಡಿದರು. ಅಷ್ಟಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಪುರಸಭೆ ಸಹಾಯಕ ಇಂಜಿನಿಯರ್ ಶಿಲ್ಪಾ, ಸಿಬ್ಬಂದಿ ಚಿರಂಜೀವಿ ದೊಡ್ಡಮನಿ, ಪ್ರಾಣೇಶ್ ಬಳ್ಳಾರಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗುರುರಾಜ ಗಾಯಕವಾಡ ಇತರರು ಇದ್ದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯ 2023-24ನೇ ಸಾಲಿನ 3ಕೋಟಿ ರೂ. ಅನುದಾನದಲ್ಲಿ 1-7ನೇ ವಾರ್ಡ್‌ನ ವಿವಿಧ ರಸ್ತೆಗಳ ಸಿಸಿ ಕಾಮಗಾರಿಗೆ ಮಾ.16ರಂದು ಶಾಸಕ ದೊಡ್ಡನಗೌಡ ಪಾಟೀಲ್ ಭೂಮಿಪೂಜೆ ನೆರವೇರಿಸಿದ್ದರು.

ಅತಿಕ್ರಮ ತೆರವುಗೊಳಿಸದೇ ಕಾಮಗಾರಿ ಆರಂಭಿಸಿದ್ದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಅತಿಕ್ರಮ ತೆರವುಗೊಳಿಸದೆ ಕಾಮಗಾರಿಗೆ ಚಾಲನೆ ಶೀರ್ಷಿಕೆ ಅಡಿ ಜೂ.17ರಂದು ವಿಜಯವಾಣಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.