ಜಿಲ್ಲೆ

ದೀಪಾವಳಿಗೆ 'ಆಪರೇಷನ್​ ಸಿಂಧೂರ' ಆಕಾಶದೀಪ

ಪರ್ಕಳದ ವಾಲಿಬಾಲ್​ ಫ್ರೆಂಡ್ಸ್​ನಿಂದ ನಿರ್ಮಾಣ

ಸಹಕಾರ ಭಾರತಿ ಉಡುಪಿ ಜಿಲ್ಲೆ ಸಹಯೋಗ

ವಿಜಯವಾಣಿ ಸುದ್ದಿಜಾಲ ಉಡುಪಿ

ಕ್ರೀಡಾ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಮಾಜಮುಖಿ ಕಾರ್ಯಗಳಿಂದಲೂ ಗಮನ ಸೆಳೆಯುವ ಉಡುಪಿ ತಾಲೂಕಿನ ಪರ್ಕಳದ ವಾಲಿಬಾಲ್​ ಫ್ರೆಂಡ್ಸ್​ ಸಂಘಟನೆಯು ಈ ಬಾರಿಯ ದೀಪಾವಳಿಯನ್ನು ವಿಜಯದ ಸ್ಮರಣೆಯೊಂದಿಗೆ ಆಚರಿಸುತ್ತಿದೆ.

ಎಲ್ಲರಲ್ಲೂ ಸಂಭ್ರಮ ಹೆಚ್ಚಿಸುವ ಬೆಳಕಿನ ಹಬ್ಬ ದಿಪಾವಳಿಯ ಈ ಸಂದರ್ಭದಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ನಡೆಸಿದ್ದ ಆಪರೇಷನ್​ ಸಿಂಧೂರದ ವಿಜಯವನ್ನು ಬೃಹತ್​ ಆಕಾಶದೀಪದೊಳಗಿನ ಬೆಳಕಿನಲ್ಲಿ ಪ್ರಜ್ವಲಿಸುವಂತೆ ಮಾಡಿದ್ದಾರೆ.

ಕಂಗೊಳಿಸುತ್ತಿದೆ ಆಕಾಶದೀಪ

ಸಹಕಾರ ಭಾರತಿ ಉಡುಪಿ ಜಿಲ್ಲೆ ಅವರ ಸಹಯೋಗದಲ್ಲಿ ಪರ್ಕಳದ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ, ಮಹಿಷಮರ್ಧಿನಿ ದೇಗುಲದ ಮುಂಭಾಗದ ರಸ್ತೆ ಮಾರ್ಗದಲ್ಲಿ ಆಕಾಶದೀಪ ಅಳವಡಿಸಲಾಗಿದೆ. 8 ಅಡಿ ಎತ್ತರದ ಗೂಡುದೀಪವನ್ನು ಎರಡು ಕಂಬಗಳ ಮಧ್ಯೆ ಹಗ್ಗದಲ್ಲಿ ಕಟ್ಟಿ ಇಡಲಾಗಿದ್ದು, ಅದರೊಳಿನ ವಿದ್ಯುತ್​ ದೀಪದ ಬೆಳಕಿನಿಂದ  ಕಂಗೊಳಿಸುತ್ತಿದೆ. ರಸ್ತೆ ಮಾರ್ಗದಲ್ಲಿ ಸಂಚರಿಸುವವರನ್ನು ಈ ಬೃಹತ್​ ಆಕಾಶ ದೀಪ ಗಮನ ಸೆಳೆಯುತ್ತಿದ್ದು, ಆಪರೇಷನ್​ ಸಿಂಧೂರ ಯುದ್ಧದ ಸಾಧನೆಯನ್ನೂ ಮತ್ತೊಮ್ಮೆ ನೆನಪಿಸುತ್ತಿದೆ.

ಹಬ್ಬದ ಸಂಭ್ರಮ ಸೇನೆಗೆ ಮೀಸಲು

ಭಾರತೀಯ ಯುದ್ಧ ವಿಮಾನಗಳ ಹಾಗೂ ಸೈನಿಕರ ಶಕ್ತಿ ಸ್ಮರಣೆ, ಭಯೋತ್ಪಾದನೆಗಿಲ್ಲ ಯಾವುದೇ ಸಹಿಷ್ಣುತೆ, ನ್ಯಾಯ ಸಲ್ಲಿಸಿದರು ಎಂದು ಅರ್ಥ ಬರುವಂತೆ ಆಕಾಶ ದೀಪದ ವಿವಿಧ ಪಾರ್ಶ್ವಗಳಲ್ಲಿ ಇಂಗ್ಲಿಷ್​ನಲ್ಲಿ ಮುದ್ರಿಸಲಾಗಿದೆ. ಒಂದು ಬದಿಯಲ್ಲಿ, ಆಕಾಶದಲ್ಲಿ ಹಾರಾಡುತ್ತ ಭಯೋತ್ಪಾದಕರ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವ ಯುದ್ಧ ವಿಮಾನದ ಚಿತ್ರ ಅಳವಡಿಸಲಾಗಿದೆ. ದೇಶವಾಸಿಗರ ಜೀವರಕ್ಷಣೆಯಲ್ಲಿ ನಿರತ ಎಲ್ಲ ಸೇನಾನಿಗಳಿಗೆ ದೀಪಾವಳಿ ಹಬ್ಬದ ಸುಭಾಶಯ ತಿಳಿಸಲು ಹಾಗೂ ನಾವೆಲ್ಲ ಸುರಕ್ಷಿತವಾಗಿರಲು ಅವರೇ ಕಾರಣ ಎನ್ನುವುದನ್ನು ಜನಮಾನಸಕ್ಕೆ ನೆಪಿಸಲು ಈ ಆಕಾಶ ದೀಪ ನಿರ್ಮಿಸಿದ್ದೇವೆ ಎಂದು ವಾಲಿಬಾಲ್​ ಫ್ರೆಂಡ್ಸ್​ ಪರ್ಕಳ ತಿಳಿಸಿದೆ.