ಚಿಕ್ಕಬಳ್ಳಾಪುರ: ಹಿಂದು ಹೆಣ್ಣು ಮಕ್ಕಳ ಮಾಂಗಲ್ಯವನ್ನು ಕಿತ್ತುಕೊಂಡಿದ್ದ ಪಾಪಿಗಳಿಗೆ ಮೋದಿ ಒಂದು ಒಳ್ಳೆಯ ಪಾಠವನ್ನು ಕಲಿಸಿದ್ದಾರೆ ಎಂದು ಸಂಸದ ಡಾ ಕೆ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಟಿಎಪಿಸಿಎಂಎಸ್ ಚುನಾವಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಜನರ ಧರ್ಮವನ್ನು ಕೇಳಿ ಭಯೋತ್ಪಾದಕರು ಕೊಂದಿದ್ದು ಸಂಬಂಧಿಕರನ್ನು ಕಳೆದುಕೊಂಡ ಅನೇಕ ಕುಟುಂಬಗಳು ಹೆಚ್ಚಿನ ನೋವು ಅನುಭವಿಸಿದ್ದರು. ದುರ್ಘಟನೆಗೆ ಇಡೀ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಅನುಗುಣವಾಗಿ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರಿಗೆ ಸೂಕ್ತ ಪಾಠ ಕಲಿಸುವ ಎಚ್ಚರಿಕೆಯನ್ನು ನೀಡಿದ್ದರು. ಅದರಂತೆ ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುತ್ತಿದೆ. ಉಗ್ರರನ್ನು ಬೇಟೆಯಾಡಿ ಕೊಲ್ಲಲಾಗುತ್ತಿದೆ. ಇದರ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ ಎಂತಲೇ ಕರೆಯಲಾಗಿದೆ ಎಂದರು.
*ಎನ್ ಡಿಎ ಅಭ್ಯರ್ಥಿಗಳ ವಿಜಯೋತ್ಸವ*
ಚಿಕ್ಕಬಳ್ಳಾಪುರ ತಾಲೂಕು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿಗಳಾದ ಆವಲಕೊಂಡರಾಯಪ್ಪ ಅಧ್ಯಕ್ಷರಾಗಿ ಹಾಗೂ ಲಕ್ಷ್ಮಿ ನರಸಿಂಹಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಟಿಎಪಿಸಿಎಂಎಸ್ ಕಚೇರಿಯಲ್ಲಿ ಶುಕ್ರವಾರ ಈ ಇಬ್ಬರು ಹೊರತುಪಡಿಸಿದಂತೆ ಉಳಿದವರು ಯಾರೂ ಉಮೇದುವಾರಿಕೆಯನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಘೋಷಿಸಲಾಯಿತು.
ಎನ್ಡಿಎ ಹಾಗೂ ಕಾಂಗ್ರೆಸ್ ನಡುವೆ ಪರಸ್ಪರ ತೀವ್ರ ಪೈಪೋಟಿ ಕಂಡು ಬಂದಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂದಲ್ಲಿ(ಟಿಎಪಿಸಿಎಂಎಸ್) ಸಂಸದ ಡಾ ಕೆ.ಸುಧಾಕರ್ ತಂತ್ರಗಾರಿಕೆಯ ಬಲದಲ್ಲಿ ಕಮಲವೇ ಅರಳಿತ್ತು.
ಎ ವರ್ಗದಲ್ಲಿ 4 ಸ್ಥಾನ ಹಾಗೂ ಬಿ ವರ್ಗದಲ್ಲಿನ ಎಲ್ಲ 9 ಸ್ಥಾನಗಳನ್ನು ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರು ಗೆದ್ದಿದ್ದು ಕಾಂಗ್ರೆಸ್ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಮುಖಭಂಗ ಅನುಭವಿಸಿತ್ತು. ಇದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯು ಯಾವುದೇ ಪೈಪೋಟಿ ಇಲ್ಲದೇ ನಡೆಯಿತು.
ಆಯ್ಕೆಯಾದವರಿಗೆ ಸಂಸದ ಡಾ ಕೆ.ಸುಧಾಕರ್ ಹಾರವನ್ನು ಹಾಕಿ, ರೈತ ಪರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸಲಹೆ ನೀಡಿದರು.