ಜಿಲ್ಲೆ

ಮೂವರು ದರೋಡೆಕೋರರ ಬಂಧನ



ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಎರಡು ದಿನಗಳ ಹಿಂದೆ ಪಟ್ಟಣದ ಯೋಗೇಶ್ ಪೆಟ್ರೋಲ್ ಬಂಕ್ ಬಳಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪೊಲೀಸರು ಗುರುವಾರ ಮುಂಜಾನೆ ಮೂವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಹೊಸರೋಡು ಕಾಲನಿ ನಿವಾಸಿ ಸೈಯದ್ ಶಬ್ಬೀರ್(23), ಬೆಂಗಳೂರಿನ ಕೋರಮಂಗಲದ ಪೊಲೀಸ್ ಕಾಲನಿ ನಿವಾಸಿ ತೇಜಸ್ ಯಾದವ್(20) ಹಾಗೂ ಕೋರಮಂಗಲ 1ನೇ ಬ್ಲಾಕ್ ವೆಂಕಟಾಪುರದ ಗೋಪಾಲ್(20) ಬಂಧಿತರು. ಬೆಂಗಳೂರಿನ ಮಹಮ್ಮದ್ ಆಶಂ ಮತ್ತು ಶಿವಮೊಗ್ಗ ಜಿಲ್ಲೆಯ ಶಾನ್ ನವಾಜ್ ಸಹ ದರೋಡೆ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಬಂಧಿತರ ವಿಚಾರಣೆ ವೇಳೆ ತಿಳಿದುಬಂದಿದೆ.
ದರೋಡೆಕೋರರಿಂದ ಒಂದು ಮೊಬೈಲ್, 2300 ರೂ.ನಗದು, ಬೈಕ್‌ನ ಕೀ, ಮಾರಕಾಸ್ತ್ರಗಳು ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 8.17 ಲಕ್ಷ ರೂ.ಗಳಾಗಿದೆ. ಬೆಂಗಳೂರು ಹಾಗೂ ಶಿವಮೊಗ್ಗ ವ್ಯಾಪ್ತಿಯ ಠಾಣೆಗಳಲ್ಲಿ ಇವರ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು.
ಬಂಧನ ಹೇಗೆ?
ಜ.7 ರಂದು ಮುಂಜಾನೆ 5.30 ರಲ್ಲಿ ಚನ್ನರಾಯಪಟ್ಟಣದಲ್ಲಿರುವ ಯೋಗೇಶ್ ಪೆಟ್ರೋಲ್ ಬಂಕ್‌ಗೆ ಕಾರಿನಲ್ಲಿ ಬಂದಿದ್ದ ದರೋಡೆಕೋರರ ತಂಡ, ಡೀಸೆಲ್ ತುಂಬಿಸಿಕೊಂಡಿದೆ. ಈ ವೇಳೆ ಕಾರಿನಲ್ಲಿದ್ದ ಐವರ ಪೈಕಿ ಒಬ್ಬ ಕೆಳಗಿಳಿದು ಬಂಕ್‌ನ ಕಾರ್ಮಿಕ ಸಂದೀಪ ಎಂಬಾತನ ಬಳಿ ಇದ್ದ 3 ಸಾವಿರ ರೂ. ಕಿತ್ತುಕೊಂಡು ಡೀಸೆಲ್‌ನ ಹಣವನ್ನೂ ಕೊಡದೆ ಕಾರಿನಲ್ಲಿ ಪರಾರಿಯಾಗಿದ್ದರು.
ಅಲ್ಲಿಂದ ಬೆಳಗ್ಗೆ 5.45ರಲ್ಲಿ ಹಿರೀಸಾವೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ಬ್ಯಾಡರಹಳ್ಳಿ ಗೇಟ್ ತಲುಪಿದ ದರೋಡೆಕೋರರು, ಕದಬಹಳ್ಳಿ ಬಳಿಯಿರುವ ಟೋಲ್‌ಗೆ ಕೆಲಸಕ್ಕೆಂದು ತನ್ನ ಬೈಕ್‌ನಲ್ಲಿ ತೆರಳುತ್ತಿದ್ದ ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದ ಸುಧಾಕರ್ ಅವರನ್ನು ಅಡ್ಡಗಟ್ಟಿ, ಆತನಿಂದ ಒಂದು ಮೊಬೈಲ್ ಹಾಗೂ ಬೈಕ್‌ನ ಕೀಯನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀರಾಮ್ ನಿವಾಸ್ ಸಪಟ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ ಹಾಗೂ ಹೊಳೆನರಸೀಪುರ ಡಿವೈಎಸ್‌ಪಿ ಬಿ.ಬಿ.ಲಕ್ಷ್ಮೇಗೌಡ ನೇತೃತ್ವದಲ್ಲಿ ಚನ್ನರಾಯಪಟ್ಟಣ ವೃತ್ತ ನಿರೀಕ್ಷಕ, ಪಿಎಸ್‌ಐ ಹಾಗೂ ಹಿರೀಸಾವೆ ಪಿಎಸ್‌ಐ ಮುಂದಾಳತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು.
ಅದರಂತೆ, ಜ.9 ರಂದು ಬೆಳಗಿನ ಜಾವ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತಂಡವು ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆ ಗ್ರಾಮಾಂತರ ಠಾಣಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ರಾತ್ರಿ ವೇಳೆ ದರೋಡೆ ನಡೆಸುತ್ತಿದ್ದ ಬಗ್ಗೆ ಬಂಧಿತರು ಒಪ್ಪಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ.ಕುಮಾರ್, ನಗರ ಠಾಣೆಯ ಪಿಎಸ್‌ಐ ಕಿರಣ್‌ಕುಮಾರ್, ಹಿರೀಸಾವೆ ಪೊಲೀಸ್ ಠಾಣೆಯ ಪಿಎಸ್‌ಐ ಭವಿತಾ, ಎಎಸ್‌ಐ ಎಚ್.ಸಿ.ಕುಮಾರಸ್ವಾಮಿ, ಸಿಬ್ಬಂದಿ ಸುರೇಶ್, ಜವರೇಗೌಡ, ಮಹೇಶ್, ಜಯಪ್ರಕಾಶ್, ರವೀಶ್, ಬೀರಲಿಂಗ, ನಾಗೇಂದ್ರ, ಹರೀಶ್, ಅರುಣ್ ಮತ್ತು ಪುತ್ತರಾಜ್, ಚಾಲಕರಾದ ಪರಮೇಶ್ ಮತ್ತು ಮಧು ಅವರನ್ನು ಅಭಿನಂದಿಸಲಾಯಿತು.