ಜಿಲ್ಲೆ

ಎಚ್ಡಿಕೆ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಆಪರೇಷನ್ ಹಸ್ತ

* ಜೆಡಿಎಸ್, ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ಗಾಳ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಚುನಾವಣೆಗೆ ಕ್ಷಣಗಣನೆ ಶುರುವಾದ ಹೊತ್ತಿನಲ್ಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸ್ವಕ್ಷೇತ್ರದಲ್ಲೇ ಆಪರೇಷನ್ ಹಸ್ತ’ ಜೋರಾಗಿದೆ. ಚನ್ನಪಟ್ಟಣ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿರುವ ಡಿ.ಕೆ.ಸಹೋದರರು ಜೆಡಿಎಸ್ ಮತ್ತು ಬಿಜೆಪಿ ಮುಖಂಡರನ್ನು ಸೆಳೆಯುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಭರ್ಜರಿ ಟಕ್ಕರ್ ಕೊಡುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಸಂಸದ ಡಿ.ಕೆ.ಸುರೇಶ್ ಹಾಗೂ ಮೈತ್ರಿಕೂಟದಿಂದ ಖ್ಯಾತ ವೈದ್ಯ ಡಾ.ಸಿ.ಎನ್.ಮಂಜುನಾಥ್  ಸ್ಪರ್ಧೆ ಯಿಂದ ಬೆಂಗಳೂರು ಗ್ರಾಮಾಂತರ ಕಣ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ರಾಜಕೀಯವನ್ನೇ ಹೊದ್ದು ಮಲಗಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.

ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಭಸೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ ತೀರಾ ದುರ್ಬಲ ಎನ್ನುವ ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಮತಬ್ಯಾಂಕ್ ಹೆಚ್ಚಿರುವುದು ಚಿಂತೆಗೆ ಕಾರಣವಾಗಿದ್ದು, ಏನಾದರೂ ಮಾಡಿ ಈ ಕ್ಷೇತ್ರದ ಮತದಾರರನ್ನು ಸೆಳೆಯಲು ಡಿ.ಕೆ. ಬ್ರದರ್ಸ್ ಆಪರೇಷನ್ ಹಸ್ತ ಶುರುಮಾಡಿಕೊಂಡಿದ್ದಾರೆ.

ಡಿ.ಕೆ.ಸಹೋದರರೇ ಅಖಾಡಕ್ಕೆ!

ಚನ್ನಪಟ್ಟಣದಲ್ಲಿ ಪಕ್ಷ ಬಲವಧರ್ನೆಗಾಗಿ ಕಾಂಗ್ರೆಸ್  ಅಭ್ಯರ್ಥಿ ಡಿ.ಕೆ.ಸುರೇಶ್ ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ನಾಯಕರ ಮೂಲಕ ಬೂತ್‌ಮಟ್ಟದಿಂದ ತಾಲೂಕುಮಟ್ಟದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ನಿರಂತರವಾಗಿ ಗಾಳ ಹಾಕಿಸುತ್ತಿದ್ದಾರೆ.

ಅಲ್ಲದೇ ಖುದ್ಧು ಅನ್ಯಪಕ್ಷಗಳ ಮುಖಂಡರ ಮನೆಗೆ ತೆರಳಿ ಕಾಂಗ್ರೆಸ್ ಶಾಲು ಹೊದಿಸಿ, ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಇತ್ತ ಸಹೋದರನ ಗೆಲುವಿಗಾಗಿ ಪಣತೊಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ತಾಲೂಕಿನ ಪ್ರಮುಖ ನಾಯಕರ ಸಂಪರ್ಕಕ್ಕೆ ಯತ್ನಿಸುತ್ತಿದ್ದಾರೆ.  ಕೈ ನಾಯಕರಾದ ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಕಾಂಗ್ರೆಸ್ ಉಸ್ತುವಾರಿ ದುಂತೂರು ವಿಶ್ವನಾಥ್, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಸೇರಿ ಹಲವರು ಆಪರೇಷನ್ ಹಸ್ತದ ನೇತೃತ್ವವಹಿಸಿದ್ದಾರೆ.

ಮೈತ್ರಿ ಮುಖಂಡರು ಕೈ ತೆಕ್ಕೆಗೆ!

ಈಗಾಗಲೇ ಜೆಡಿಎಸ್ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಹಾಗೂ ಸಹೋದರರು, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ದಿ. ಎಂ.ವರದೇಗೌಡ ಅವರ ಕುಟುಂಬ, ರಾಂಪುರ ಮಲವೇಗೌಡ, ಹರೂರು ರಾಜಣ್ಣ, ಸಿಂಗರಾಜಿಪುರ ರಾಜಣ್ಣ, ಮುದಗೆರೆ ಸಂತೋಷ್, ಸುಧಾಮುರುಳಿ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇವರಲ್ಲದೇ ತಾಲೂಕಿನ ವಿವಿಧ  ಗ್ರಾಮಗಳ ಮೈತ್ರಿ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರು ಕೈ ಹಿಡಿದಿದ್ದಾರೆ, ಹಿಡಿಯುತ್ತಿದ್ದಾರೆ. ಇದರೊಂದಿಗೆ ಗುರುವಾರ ತಡರಾತ್ರಿ ಬೆಂಗಳೂರಿನ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಜೆಡಿಎಸ್‌ನ 9 ಮಂದಿ ನಗರಸಭಾ  ಸದಸ್ಯರು ಹಾಗೂ ಓರ್ವ ಪಕ್ಷೇತರ ಸದಸ್ಯೆ ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಡಿ.ಕೆ.ಸಹೋದರರು ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಬಿಗ್‌ ಶಾಕ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಆಪರೇಷನ್ ಹಸ್ತ ಜೋರಾಗುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ, ರಿವರ್ಸ್ ಆಪರೇಷನ್ ಆರಂಭವಾದರೂ ಅಚ್ಚರಿಪಡಬೇಕಿಲ್ಲ.

ಕೈಗೆ ಬೊಂಬೆನಾಡಿನದ್ದೇ ಚಿಂತೆ!

ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ  ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಿತಿ ದಯನೀಯವಾಗಿರುವುದು ಡಿ.ಕೆ.ಸಹೋದರರಿಗೆ ಹೆಚ್ಚಿನ ಚಿಂತೆ ತರಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ 96,592 ಮತ ಪಡೆದು ಜಯಶಾಲಿಯಾಗಿದ್ದು, ಪ್ರತಿಸ್ಪರ್ಧಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ 80,677 ಮತ ದಕ್ಕಿಸಿಕೊಂಡಿದ್ದರು.  ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ಕೇವಲ 15,374 ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.

ಈ ಲೆಕ್ಕಾಚಾರದ ಪ್ರಕಾರ ಮೈತ್ರಿ ಪಕ್ಷಗಳ ಮತಗಳು ಕ್ರೋಡೀಕರಣವಾದರೆ, ಕಾಂಗ್ರೆಸ್‌ಗೆ ಹೆಚ್ಚಿನ ಹೊಡೆತ ಬೀಳಲಿದೆ ಎನ್ನುವ ಆತಂಕ ಡಿ.ಕೆ.ಸಹೋದರರನ್ನು ಕಾಡುತ್ತಿದೆ. ಅದಕ್ಕಾಗಿ ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅದರ ಪ್ರಮುಖ  ಭಾಗವೇ ಆಪರೇಷನ್ ಹಸ್ತ ಎನ್ನಲಾಗುತ್ತಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಡಿ.ಕೆ.ಸಹೋದರರ ನಾಯಕತ್ವ ಮೆಚ್ಚಿ ತಾಲೂಕಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಬಿಜೆಪಿ-ಜೆಡಿಎಸ್‌ನ ಅಪವಿತ್ರ ಮೈತ್ರಿಯಿಂದಲೂ ಬೇಸರಗೊಂಡ ಹಲವರು ಸ್ವಯಂಪ್ರೇರಿತರಾಗಿ ಕೈ ಹಿಡಿಯುತ್ತಿದ್ದಾರೆ. ಕಾಂಗ್ರೆಸ್ ಸೇರುವವರ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಎಸ್.ಆರ್.ಪ್ರಮೋದ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

 ನಮ್ಮ ಪಕ್ಷದಲ್ಲಿ ಗೆದ್ದ ನಗರಸಭೆ ಸದಸ್ಯರನ್ನು 5 ರಿಂದ 10 ಲಕ್ಷ ಹಣ ಕೊಟ್ಟು ಹಾಗೂ 50 ಲಕ್ಷದ ಕಾಮಗಾರಿಯ ಆಮಿಷ ಒಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇದರೊಂದಿಗೆ, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೂ ಅಣ್ಣತಮ್ಮಂದಿರು ನಾನಾ ಆಮಿಷ ಒಡ್ಡುತ್ತಿದ್ದಾರೆ. ದುಡ್ಡಿನ ಮದದಿಂದ ಚುನಾವಣೆ ಗೆಲ್ಲುವ ತವಕದಲ್ಲಿದ್ದಾರೆ. ಅದು ಅವರ ಭ್ರಮೆ. ಈ ರೀತಿಯ ರಾಜಕೀಯಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ

ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ.

ಮೈತ್ರಿ ಪಕ್ಷದಿಂದ ಡಾ.ಮಂಜುನಾಥ್ ರವರು ಅಭ್ಯರ್ಥಿಯಾದ ದಿನದಿಂದಲೂ ಕಾಂಗ್ರೆಸ್ ಅಭ್ಯರ್ಥಿಗೆ ನಿದ್ದೆಗೆಟ್ಟಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಮತಪಡೆಯಲು ಕೈ ಅಭ್ಯರ್ಥಿ ನಾನಾ ಹರಸಾಹಸ ಪಡುತ್ತಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರನ್ನು ಹಣದಿಂದ ಖರೀದಿಸುತ್ತೇವೆ ಎಂಬುದು ಕನಸಿನ ಮಾತು. ತಾಲೂಕಿನ ಅಭಿವೃದ್ಧಿಗೆ ನಾನು ಹಾಗೂ ಕುಮಾರಸ್ವಾಮಿ ಸಾಕಷ್ಟು ಶ್ರಮಿಸಿದ್ದೇವೆ. ಅವರ ಕೊಡುಗೆ ಶೂನ್ಯ. ಈ ಎಲ್ಲವೂ ಕ್ಷೇತ್ರದ ಮತದಾರರಿಗೆ ಗೊತ್ತಿದೆ. ಮೈತ್ರಿ ಅಭ್ಯರ್ಥಿಗೆ ನಮ್ಮ ಕ್ಷೇತ್ರದಲ್ಲಿ ಬಾರಿ ಬಹುಮತ ಸಿಗಲಿದೆ.

ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ.