ಖಾನಾಪುರ ತಾಲೂಕಿನ ಜಲಗಾ ಗ್ರಾಮದ ರವಳನಾಥ ದೇವಸ್ಥಾನದ ಬಳಿ ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಆನೆ ಸೆರೆ ಹಿಡಿದಿರುವುದು. 
ಜಿಲ್ಲೆ

ಆಪರೇಷನ್ ಗಜರಾಜ ಯಶಸ್ವಿ

ಶಂಕರ ಗೆಜ್ಜಿ

ಖಾನಾಪುರ: ತಾಲೂಕಿನ ಚಾಪಗಾಂವ, ಕರ್ಲಗಾ, ಜಲಗಾ, ಖಾನಾಪುರ ಭಾಗದಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಬೀಡು ಬಿಟ್ಟು ಜನರಿಗೆ ಉಪಟಳ ನೀಡುತ್ತಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗುರುವಾರ ಸೆರೆ ಹಿಡಿದಿದ್ದಾರೆ.

ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್‌ನಿಂದ ತರಬೇತಿ ಪಡೆದಿದ್ದ ನಾಲ್ಕು ಆನೆಗಳನ್ನು ಕರೆತರಲಾಗಿತ್ತು. ಬೆಳಗ್ಗೆಯಿಂದ ಆನೆಗಾಗಿ ಹುಡುಕಾಟ ನಡೆಸಲಾಯಿತು. ಈ ವೇಳೆ ಜಲಗಾ ಬಳಿಯ ರವಳನಾಥ ದೇವಸ್ಥಾನದ ಪ್ರದೇಶದಲ್ಲಿ ಆನೆ ಕಾಣಿಸಿಕೊಂಡಿತು. ಈ ವೇಳೆ ಅರಿವಳಿಕೆ ಮದ್ದು ನೀಡಿ, ಆನೆಗಳ ಸಹಾಯದಿಂದ ಕ್ರೇನ್ ಬಳಸಿ ಆನೆ ಸೆರೆಹಿಡಿದು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ತರಬೇತಿ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

ಜಿಲ್ಲಾ ಅರಣ್ಯ ಸಂರಕ್ಷಣೆ ಅಧಿಕಾರಿ ಮಂಜುನಾಥ ಚವ್ಹಾಣ, ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತಾ, ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ, ವಿಭಾಗೀಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ, ಲೋಂಡಾ, ನಾಗರಗಾಳಿ, ಹೇಮಡಗಾ ವಿಭಾಗಗಳ ವಿಭಾಗೀಯ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.