ಮಂಡ್ಯ: ತಾಲೂಕಿನ ಹಂಪಾಪುರ ಗ್ರಾಮದ ಪೂಜೆಗೆ ಅವಕಾಶ ನೀಡುತ್ತಿಲ್ಲ ಎಂಬ ಕಾರಣಕ್ಕೆ ಪಟ್ಟಲದಮ್ಮ ದೇವಾಲಯಕ್ಕೆ ಹಾಕಲಾಗಿದ್ದ ಬೀಗವನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಗಿದೆ. ಅಂತೆಯೇ ಪೂಜೆಗೆ ಅವಕಾಶ ಮಾಡಿಕೊಡಲಾಯಿತು.
ಮುಜರಾಯಿ ಇಲಾಖೆಗೆ ಸೇರಿದ್ದ ದೇವಾಲಯದಲ್ಲಿ ಪೂಜೆಗೆ ಸಂಬಂಧಿಸಿದಂತೆ ಹಬ್ಬದ ಮಾರ‌್ನಹಳ್ಳಿ, ಕರಡಿಕೊಪ್ಪಲು, ಚೋಕನಹಳ್ಳಿ ಹಾಗೂ ಹಂಪಾಪುರ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ದೇವಾಲಯದ ಗೋಪುರ ನಿರ್ಮಿಸಿ ಅಭಿವೃದ್ಧಿಗೂ ಮುನ್ನ ಯಾರು ಬೇಕಾದರೂ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅವಕಾಶ ಇತ್ತು. ಆದರೆ ಗೋಪುರ ನಿರ್ಮಿಸಿ ಅಭಿವೃದ್ಧಿಪಡಿಸಿದ ನಂತರ ಪೂಜೆ ಮಾಡುವ ವಿಚಾರದಲ್ಲಿ ನಾಲ್ಕೂ ಗ್ರಾಮಗಳಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಕಳೆದ ಒಂದು ತಿಂಗಳ ಹಿಂದೆ ದೇವಾಲಯಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದರು.
ಅಂದಿನಿಂದ ಸುತ್ತಮುತ್ತಲ ಭಕ್ತರು ಹಬ್ಬ ಮಾಡಲು ತೊಂದರೆಯಾಗಿತ್ತು. ಈ ಬಗ್ಗೆ ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಬಳಿ ಮನವಿ ಮಾಡಲಾಯಿತು. ದೇವಾಲಯಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ವೇಳೆ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಲ್ಪಟ್ಟಿದೆ ಎಂಬ ಮಾಹಿತಿ ಲಭ್ಯವಾಯಿತು. ನಾಲ್ಕೂ ಗ್ರಾಮಗಳ ಗ್ರಾಮಸ್ಥರಿಗೆ ದೇವಾಲಯಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಹಾಜರುಪಡಿಸುವಂತೆ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅವರು ಸೂಚಿಸಿದರು. ಎಲ್ಲ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿದ ಅಧಿಕಾರಿಗಳು ಸೋಮವಾರ ದೇವಾಲಯಕ್ಕೆ ತೆರಳಿ ಸುತ್ತಮುತ್ತಲ ಗ್ರಾಮಸ್ಥರು, ಭಕ್ತರ ಸಮ್ಮುಖದಲ್ಲಿ ಎಲ್ಲ ಮುಖಂಡರೊಟ್ಟಿಗೆ ಚರ್ಚೆ ನಡೆಸಿ ಅಂತಿಮವಾಗಿ ದೇವಾಲಯದಲ್ಲಿ ಹಿಂದೆ ಇದ್ದ ಪದ್ಧತಿಯಂತೆ ಯಾರು ಬೇಕಾದರೂ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಿ ದೇವಾಲಯದ ಬಾಗಿಲನ್ನು ತೆರೆಸಲು ನಿರ್ಧರಿಸಿದರು.
ಇದಕ್ಕೆ ಎಲ್ಲ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರಾದರೂ, ದೇವರ ಪೂಜೆಗೆಂದೇ ಅರ್ಚಕರೊಬ್ಬರನ್ನು ನೇಮಿಸುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಇದಕ್ಕೆ ಸಮ್ಮತಿ ಸೂಚಿಸಿ ಪೂಜೆಗೆ ಎಲ್ಲರೂ ಒಪ್ಪಿಕೊಂಡರು. ಇದರಿಂದ ಪಟ್ಟಲದಮ್ಮ ದೇವಾಲಯದಲ್ಲಿ ಪೂಜೆ ಎಂದಿನಂತೆ ನಡೆಯಲಿದೆ ಎಂದು ಘೋಷಿಸಿದರು.
ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಡಿವೈಎಸ್ಪಿ ಲಕ್ಷ್ಮೀನಾರಾಯಣ್, ಸಿಪಿಐ ಮಹೇಶ್, ಪಿಎಸ್‌ಐ ದೀಕ್ಷಿತ್, ಗ್ರಾ.ಪಂ ಸದಸ್ಯ ಸತೀಶ್ ಇತರರಿದ್ದರು.