ಜಿಲ್ಲೆ

ಶಕ್ತಿಸೌಧದ ಎದುರೇ ಬಾಯ್ತೆರೆದ ಕೊಳವೆಬಾವಿ!

ಅಪಾಯಕ್ಕೆ ಆಹ್ವಾನ ನೀಡುವ ನಿರುಪಯುಕ್ತ ಬೋರ್​ ವೆಲ್​

ಕಂಡರೂ ಕಾಣದಂತಿರುವ ಅಧಿಕಾರಿಗಳು

ಎಂ.ಎಸ್​.ಸಿದ್ದಲಿಂಗೇಶ್ವರ ಮಾಗಡಿ

ತೆರೆದ ಕೊಳವೆಬಾವಿಯಿಂದ ಅನಾಹುತವಾಗುವ ಪ್ರಕರಣಗಳು ಆಗಾಗ ವರದಿಯಾಗುತ್ತಿದ್ದರೂ ತಾಲೂಕಿನ ಶಕ್ತಿ ಸೌಧದ ಆವರಣದಲ್ಲೇ ಕೊಳವೆಬಾವಿಯನ್ನು ತೆರೆದಂತೆ ಬಿಟ್ಟಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.

ತಾಲೂಕು ಕಚೇರಿಯ ಉಪಯೋಗಕ್ಕಾಗಿ ಕೊರೆಯಲಾಗಿದ್ದ ಕೊಳವೆ ಬಾವಿಯಲ್ಲಿ ನೀರಿಲ್ಲದ ಕಾರಣ ಅದನ್ನು ಮುಚ್ಚದೆ ಬಿಡಲಾಗಿದೆ. ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಹಾಗೇನಾದರೂ ಆದರೆ ಹೊಣೆ ಯಾರು? ಎಂಬ ಪ್ರಶ್ನೆಯನ್ನೂ ಅದು ಹುಟ್ಟಿಸಿದೆ.

ಜಾಣ ಮೌನ: ತಾಲೂಕು ಕಚೇರಿ ಸಿಬ್ಬಂದಿ ಕಚೇರಿಗೆ ಬರುವಾಗ, ಹೋಗುವಾಗ ತೆರೆದ ಕೊಳವೆಬಾವಿಯನ್ನು ನೋಡಿಕೊಂಡೇ ಬರುತ್ತಾರೆ ಹೊರತು, ಮುಚ್ಚಲು ಯಾರೊಬ್ಬರೂ ಮುಂದಾಗದೆ ಇರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ. ನಾಲ್ಕೈದು ವರ್ಷದಿಂದ ಕೊಳವೆಬಾವಿ ಬಾಯಿತೆರೆದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕಿದ್ದರೂ ಜಾಣ ಮೌನ ವಹಿಸಿದ್ದಾರೆ.

ಅಧಿಕಾರಿಗಳಿಗೆ ದಂಡ ಹಾಕೋರ್ಯಾರು?:

ಗ್ರಾಪಂ ವ್ಯಾಪ್ತಿಯ ಹಾಗೂ ರೈತರ ಅನುಪಯುಕ್ತ ಕೊಳವೆಬಾವಿ ಮುಚ್ಚದೆ ಇದ್ದರೆ ಅಂಥ ಕೊಳವೆ ಬಾವಿಯ ಮಾಲೀಕರಿಗೆ ದಂಡ ಹಾಕಲು ಮುಂದಾಗುವ ಅಧಿಕಾರಿಗಳೇ ಇಂಥ ಬೇಜವಾಬ್ದಾರಿ ತೋರಿದ್ದು, ಅವರಿಗೆ ಯಾರು ದಂಡ ಹಾಕುತ್ತಾರೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ಇಷ್ಟು ದಿನ ಹುಲ್ಲು ಬೆಳೆದಿದ್ದ ಕಾರಣ ಬಾವಿ ಕಾಣಿಸಿಲ್ಲ. ಕೂಡಲೇ ಕೊಳವೆ ಬಾವಿ ಮುಚ್ಚಿಸುತ್ತೇನೆ.

> ಶರತ್​ ಕುಮಾರ್​, ತಹಸೀಲ್ದಾರ್​

ಅನುಪಯುಕ್ತ ಕೊಳವೆ ಬಾವಿ ಬಾಯಿತೆರೆದಿರುವುದನ್ನು ಪ್ರತಿ ನಿತ್ಯ ತಾಲೂಕು ಕಚೇರಿ ಅಧಿಕಾರಿಗಳು ನೋಡಿದರೂ ಮುಚ್ಚದೆ ರ್ನಿಲ್ಯಸಿರುವುದು ಬೇಸರದ ಸಂಗತಿ. ತಾಲೂಕು ಕಚೇರಿಯಲ್ಲೆ ಈ ರೀತಿಯಾದರೆ ಬೇರೆಡೆ ಇನ್ನೇನು ಪರಿಸ್ಥಿತಿ ಇದೆಯೋ ಎಂಬ ಅನುಮಾನ ಮೂಡಿದೆ.

ಜುಟ್ನಹಳ್ಳಿ ಆರ್​.ದಿನೇಶ್​.

ಕೆಂಪೇಗೌಡ ರೈತ ಸಂದ ಅಧ್ಯಕ್ಷ